ರಾಜ್ಯದ ಹೊರಭಾಗಕ್ಕೂ ಕನ್ನಡದ ಕಂಪನ್ನು ಪಸರಿಸಲು ಮುಂದಾದ ಕನ್ನಡ ಸೇನೆ

ಬೆಂಗಳೂರು, ಅ.25- ನಾಡಿನಲ್ಲಿ ನಿರಂತರವಾಗಿ ಕನ್ನಡದ ಕೆಲಸ ಮಾಡುತ್ತಿರುವ ಕೆ.ಆರ್. ಕುಮಾರ್ ನಾಯಕ್ವದ ಕನ್ನಡ ಸೇನೆ ಇದೀಗ, ಕನ್ನಡದ ಕಂಪನ್ನು ರಾಜ್ಯದ ಹೊರಭಾಗಕ್ಕೂ ಪಸರಿಸಲುವ ಮುಂದಾಗಿದೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ವರ್ಷ ನೆರೆಯ ತೆಲಂಗಾಣ ರಾಜ್ಯದಲ್ಲಿ ಇದೇ 31ರಂದು ರಾಜ್ಯ ಮತ್ತು ಹೊರ ರಾಜ್ಯ ಕನ್ನಡಿಗರ ಸಮ್ಮಿಲನ ಆಯೋಜಿಸಿರುವ ಕನ್ನಡ ಸೇನೆ, ಈ ಮೂಲಕ ಆ ರಾಜ್ಯದಲ್ಲಿರುವ ಕನ್ನಡಿಗರಲ್ಲಿ ಭಾಷಾಭಿಮಾನ ತುಂಬಲು ಹಾಗೂ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ವದ ಪ್ರಯತ್ನಕ್ಕೆ ಕೈಹಾಕಿದೆ.

ನಾನಾ ಕಾರಣಗಳಿಗಾಗಿ ಹೊರರಾಜ್ಯಕ್ಕೆ ಹೋಗಿರುವ ಕನ್ನಡಿಗರು ಕೂಡ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕು. ಅವರಲ್ಲಿಯೂ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಇಂತಹ ಹೊಸ ಉಪಕ್ರಮಕ್ಕೆ ನಮ್ಮ ಸಂಘಟನೆ ಮುಂದಾಗಿದೆ ಎಂದು ಕೆ.ಆರ್. ಕುಮಾರ್ ಹೇಳುತ್ತಾರೆ.

ಹಲವು ವರ್ಷಗಳಿಂದ ಕನ್ನಡದ ಕೆಲಸದಲ್ಲಿ ತೊಡಗಿರುವ ಕನ್ನಡ ಸೇನೆ, ಕನ್ನಡ ಭಾಷೆ, ನೆಲ ಜಲ ವಿಷಯ ಬಂದಾಗ ಬೀದಿಗಿಳಿದು ಹೋರಾಟ ನಡೆಸಿ ಕನ್ನಡಕ್ಕೆ ತನ್ನ ಬದ್ಧತೆ ಪ್ರದರ್ಶಿಸಿದೆ. ಇದರ ಮುಂದುವರಿದ ಭಾಗವಾಗಿ ಇದೀಗ ತೆಲಂಗಾಣ ರಾಜ್ಯದಲ್ಲಿ ಕನ್ನಡದ ಬಾವುಟ ಹಾರಿಸಲು ನಿರ್ಧರಿಸಿದೆ.

ತೆಲಂಗಾಣದ ಹೈದರಾಬಾದ್‍ನ ಕಾಚಿಗುಡ ಲಿಂಗಪಲ್ಲಿ ಸಾಹಿತ್ಯ ಮಂದಿರ ರಸ್ತೆಯಲ್ಲಿರುವ ಕರ್ನಾಟಕ ಸಾಹಿತ್ಯ ಮಂದಿರಲ್ಲಿ ಅಕ್ಟೋಬರ್ 31ರಂದು ಬುಧವಾರ 63ನೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಅಂದು ಅಧಿದೇವತೆ ತಾಯಿ ಭುವನೇಶ್ವರಿ ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಹಾಸ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನ ರೂಪಕಲಾ ನೃತ್ಯಶಾಲಾ ಮತ್ತು ಹೈದರಾಬಾದ್‍ನ ಕರ್ನಾಟಕ ಸಾಹಿತ್ಯ ಮಂದಿರ ಕೂಡ ಈ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದು, ಕಾರ್ಯಕ್ರಮದ ವೇದಿಕೆಗೆ ಕೆರೋಡಿ ಸಾಹಿತ್ಯ ಮಂದಿರ ಎಂದು ಹೆಸರಿಡಲಾಗಿದೆ.
ಅಂದು ಬೆಳಗ್ಗೆ 10 ಗಂಟೆಗೆ ಸೈಬರಾಬಾದ್‍ನ ಪೆÇಲೀಸ್ ಆಯುಕ್ತ ವಿ.ಸಿ.ಸಜ್ಜನರ್ ಭುವನೇಶ್ವರಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಬಿಬಿಎಂಪಿ ಸದಸ್ಯ ಎಂ.ಮಹದೇವ್ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಸಲೀಂ ಅಹ್ಮದ್, ಮುಖಂಡರಾದ ಬೊಮ್ಮನಹಳ್ಳಿ ಮುನಿರಾಜುಗೌಡ, ಟಿ.ಆರ್. ಮಹೇಶ್ ಗೌಡ, ಧನರಾಜ್ ಜೀರಿಗೆ, ಡಾ.ಶೈಲೇಂದ್ರ ಬೆಳ್‍ದಾಳೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
11.30ಕ್ಕೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಕೃಷ್ಣದೇವರಾಯ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉದ್ಯಮಿ ವಿಠ್ಠಲ ಜೋಷಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟಿ ಜಮುನಾ,ನಿರ್ದೇಶಕ ಟಿ.ಎಸ್. ನಾಗಾಭರಣ, ಸಾಹಿತಿಗಳಾದ ಬೆಳ್ಳಿ ಬಟ್ಟಲು ರಾಮಚಂದ್ರರಾವ್, ಕುರುಡಿ ರಾಘವೇಂದ್ರ ರಾವ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ.

ಅಂದು ಮಧ್ಯಾಹ್ನ ರೂಪಕಲಾ ನೃತ್ಯ ಶಾಲೆಯ ಕಲಾ ತಂಡದಿಂದ ನೃತ್ಯ ಪ್ರದರ್ಶನ, ಸಾತ್ವಿಕಂ ರಂಗ ಸಂಸ್ಥೆಯಿಂದ ರಂಗಸಿರಿ ನಾಟಕ ಪ್ರದರ್ಶನ, ಸರಿಗಮಪ ಖ್ಯಾತಿಯ ಹರ್ಷ, ವಿನಯ್ ಅಲಾಪ್ ತಂಡದಿಂದ ನಾಡು, ನುಡಿ ಬಗ್ಗೆ ಜಾಗೃತಿ ಗೀತೆಗಳು ಹಾಗೂ ಸಂಜೆ 4 ಗಂಟೆಗೆ ಮಿಮಿಕ್ರಿ ಗೋಪಿ, ಕೂಡ್ಲಗಿ ಕೊಟ್ರೇಶ್ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಒಟ್ಟಿನಲ್ಲಿ ಕರ್ನಾಟಕ ನಾಡು, ನುಡಿ, ನೆಲ ಜಲ, ಹಿತಕ್ಕಾಗಿ ಸಕ್ರಿಯ ಹೋರಾಟ ನಡೆಸುತ್ತಾ ಬಂದಿರುವ ಕನ್ನಡ ಸೇನೆ ಈ ವರ್ಷ ಕನ್ನಡ ರಾಜ್ಯೋತ್ಸವವನ್ನು ಹೊರ ರಾಜ್ಯದಲ್ಲಿ ಆಚರಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಿಂದಲೂ ಶ್ಲಾಘನೆ ವ್ಯಕ್ತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ