ಬೆಂಗಳೂರು, ಅ.25- ಸಾರಿಗೆ ಇಲಾಖೆ ಹರಾಜು ಹಾಕುವ ಫ್ಯಾನ್ಸಿ ನಂಬರ್ ಖರೀದಿ ಮಾಡಲು ವಾಹನ ಮಾಲೀಕರು ನಿರಾಸಕ್ತಿ ತೋರುತ್ತಿದ್ದಾರೆ.
ಹೆಚ್ಚುವರಿ ಆದಾಯ ಸಂಗ್ರಹಕ್ಕಾಗಿ ಸಾರಿಗೆ ಇಲಾಖೆ ಖಾಸಗಿ ವಾಹನಗಳ ನೋಂದಣಿ ಸಂಖ್ಯೆಗಳನ್ನು ಹಾಕುವ ಹರಾಜಿನಲ್ಲಿ ವಾಹನ ಮಾಲೀಕ ತಮಗೆ ಇಷ್ಟವಾದ ಸಂಖ್ಯೆಯನ್ನು ಹರಾಜಿನಲ್ಲಿ ಕೂಗಿ ಪಡೆದುಕೊಳ್ಳಲು ಅವಕಾಶವಿದೆ.
ಇಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಬೆರಳೆಣಿಕೆ ಮಂದಿಯಷ್ಟು ಮಾತ್ರ ಭಾಗವಹಿಸಿದ್ದರು. ಅದರಲ್ಲೂ ಫ್ಯಾನ್ಸಿ ನಂಬರ್ ಖರೀದಿ ಮಾಡಿದ್ದು ಕೇವಲ 7 ಮಂದಿ. ಇಂದು ನಡೆದ ಬಿಡ್ನಲ್ಲಿ ಅತಿ ಹೆಚ್ಚು ಮೊತ್ತ ಕೇವಲ 30ಸಾವಿರ. ಉಳಿದ ಆರು ಸಂಖ್ಯೆಗಳು ಕೇವಲ 500ರೂ.ಗೆ ಮಾರಾಟವಾದವು.
ಹರಾಜು ಪ್ರಕ್ರಿಯೆಯಲ್ಲಿ ಭಾಗಹಿಸುವ ಮೂಲಕ ಬಿಡ್ದಾರರು 70ಸಾವಿರ ಮುಂಗಡ ಪಾವತಿಸಬೇಕು. ಆ ಮೊತ್ತ ಒಳಗೊಂಡಂತೆ ಹರಾಜು ಕೂಗಿದ ಮೊತ್ತ ಸೇರಿ ಫ್ಯಾನ್ಸಿ ನಂಬರ್ ಖರೀದಿ ಮಾಡಲಾಗುತ್ತದೆ. ಇಂದು ಬೆಂಗಳೂರಿನ ಮಂಜುನಾಥ್ ಎಂಬುವರು ಕೆಎ04 ಎಂಡಬ್ಲ್ಯೂ7 ಸಂಖ್ಯೆಯನ್ನು 30ಸಾವಿರ ರೂ.ಗೆ ಬಿಡ್ಕೂಗಿ ಮುಂಗಡ ಪಾವತಿ ಸೇರಿದಂತೆ 75 ಸಾವಿರ ಸೇರಿದಂತೆ 1.05ಲಕ್ಷ ರೂ.ಗಳಿಗೆ ಖರೀದಿ ಮಾಡಿದ್ದಾರೆ.
ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಾರಾಯಣಸ್ವಾಮಿ ಅವರು ಫ್ಯಾನ್ಸಿ ನಂಬರ್ ಖರೀದಿಯಲ್ಲಿ ವಾಹನ ಮಾಲೀಕರು ತೋರುತ್ತಿರುವ ನಿರಾಸಕ್ತಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಯುಧಪೂಜೆ, ದೀಪಾವಳಿ ಸಂದರ್ಭದಲ್ಲಿ ಹೆಚ್ಚು ವಾಹನಗಳು ಖರೀದಿಯಾಗುವುದರಿಂದ ಫ್ಯಾನ್ಸಿ ನಂಬರ್ ಮಾರಾಟವೂ ಹೆಚ್ಚಾಗಬೇಕಿತ್ತು. ಆದರೆ, ಸಾರ್ವಜನಿಕರು ಆಸಕ್ತಿ ತೊರೆದೆ ಇರುವುದರಿಂದ ಅಚ್ಚರಿ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೆಲ್ಲಾ ಪ್ರತಿ ಫ್ಯಾನ್ಸಿ ನಂಬರ್ 4ರಿಂದ 5 ಲಕ್ಷ ರೂ.ಗಳಿಗೆ ಹರಾಜಾದ ಉದಾಹರಣೆಗಳಿವೆ. ಇತ್ತೀಚೆಗೆ ಸಾರ್ವಜನಿಕರಲ್ಲಿ ಫ್ಯಾನ್ಸಿ ನಂಬರ್ ಕ್ರೇಜ್ ಇಲ್ಲದಂತಾಗಿದೆ ಎಂಬ ಮಾತುಗಳು ಇಂದಿನ ಹರಾಜು ಪ್ರಕ್ರಿಯೆ ವೇಳೆ ಕೇಳಿ ಬಂದಿತು.