ವಿಜಯದಶಮಿ ಮುಗಿದು ಒಂದು ವಾರವಾದರೂ ರಾರಾಜಿಸುತ್ತಿದೆ ಕಸದ ಸಮಸ್ಯೆ

ಬೆಂಗಳೂರು, ಅ.25- ದಸರಾಹಬ್ಬ, ಆಯುಧಪೂಜೆ, ವಿಜಯದಶಮಿ ಮುಗಿದು ಒಂದು ವಾರವಾಯಿತು. ನಗರದಲ್ಲಿ ಕಸದ ಸಮಸ್ಯೆ ಮರುಕಣಿಸಬಾರದು ಎಂದು ಮೇಯರ್ ಗಂಗಾಂಬಿಕೆ ಎಚ್ಚರಿಕೆ ನೀಡಿದ್ದರು. ಆದರೆ, ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತೂ ಇದ್ದಂತೆ ಕಾಣುತ್ತಿಲ್ಲ.

ಹಬ್ಬ ಮುಗಿದರೂ ಬಾಳೆ ಕಂದು, ಮಾವಿನ ಸೊಪ್ಪು ಮತ್ತಿತರ ವಸ್ತುಗಳು ರಸ್ತೆ ಪಕ್ಕದಲ್ಲೇ ರಾರಾಜಿಸುತ್ತಿದೆ. ಇದಕ್ಕೆ ತಕ್ಕ ಉದಾಹರಣೆ ಕಾಮಾಕ್ಷಿಪಾಳ್ಯದ ಮುಖ್ಯರಸ್ತೆ.

ಕಾಮಾಕ್ಷಿಪಾಳ್ಯದ ಮುಖ್ಯರಸ್ತೆಯಲ್ಲಿ ಕಸದ ರಾಶಿ ರಾರಾಜಿಸುತ್ತಿದೆ. ಸ್ಥಳೀಯ ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರು ಕಸದ ಮೇಲೆಯೇ ಹೋಗಬೇಕಾಗಿದೆ.

ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಆದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಮೇಯರ್ ಅವರ ಮಾತಿಗೆ ಅಧಿಕಾರಿಗಳು ಬೆಲೆಯೇ ನೀಡಿಲ್ಲ. ಇದು ನಿಜಕ್ಕೂ ದುರಂತ.
ಇನ್ನಾದರೂ ಬಿಬಿಎಂಪಿ ಎಚ್ಚೆತ್ತುಕೊಂಡು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ