ಬೆಂಗಳೂರು: ಜಮಖಂಡಿ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಮೂರ್ನಾಲ್ಕು ದಿನದಿಂದ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್ ಮತ್ತೊಮ್ಮೆ ಗೆಲ್ಲುವ ಪೂರಕ ವಾತಾವರಣ ಅಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ತಿಳಿಸಿದ್ದಾರೆ.
ಸಿದ್ದು ನ್ಯಾಮಗೌಡರು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರ ಮಗ ಯುವಕನಾಗಿದ್ದರೂ ತಂದೆಯ ಮಾರ್ಗದಲ್ಲಿಯೇ ಸಾಗಿದ್ದಾರೆ. ಹೀಗಾಗಿ ಅವರು ಗೆಲ್ಲುವ ವಿಶ್ವಾಸವಿದೆ ಎಂದರು.
ಇನ್ನು ಬಳ್ಳಾರಿಯಲ್ಲಿ ಕೆಲವರು ಜಾತಿ ಹೆಸರಿನಲ್ಲಿ ಮತಯಾಚನೆ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಯಾರೂ ಕೂಡ ಜಾತಿ ಮುಂದಿಟ್ಟುಕೊಂಡು ಹೋಗಬಾರದು ಎಂದರು.
ವಾಲ್ಮಿಕಿ ಜಯಂತಿಗೆ ಗೈರಾಗಿದ್ದಕ್ಕೆ ಕ್ಷಮೆ:
ಇದೇ ವೇಳೆ ವಾಲ್ಮಿಕಿ ಜಯಂತಿ ಕಾರ್ಯಕ್ರಮಕ್ಕೆ ಹೋಗದೇ ಇರುವುದಕ್ಕೆ ಆ ಸಮುದಾಯದವರ ಕ್ಷಮೆಯಾಚಿಸುವೆ ಎಂದ ಉಪಮುಖ್ಯಮಂತ್ರಿ ಈ ಕಾರ್ಯಕ್ರಮಕ್ಕೆ ಸಿಎಂ ಹೋಗುವ ನಿರೀಕ್ಷೆ ಇತ್ತು. ನಾನು ಈ ಸಂದರ್ಭದಲ್ಲಿ ಜಮಖಂಡಿಯಲ್ಲಿ ಪ್ರಚಾರದಲ್ಲಿದ್ದೆ ಎಂದಿದ್ದಾರೆ.
ಸಿಎಂ ಅವರಿಗೆ ಅನಿರೀಕ್ಷಿತವಾಗಿ ಅನಾರೋಗ್ಯ ಎದುರಾದ ಕಾರಣ ಅವರು ಹೋಗಲಾಗಿಲ್ಲ. ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಹೀಗಾಗಿ ವಾಲ್ಮಿಕಿ ಸಮುದಾಯದ ಭಾವನೆಗೆ ದಕ್ಕೆಯಾಗಿದ್ದರೆ ಕ್ಷಮೆಯಾಚಿಸುವೆ ಎಂದರು.