ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್​ ಹೊಸ ತಂತ್ರ : ನಾಳೆ ಸಿಬಿಐ ಕಚೇರಿ ಎದುರು ಭಾರಿ ಪ್ರತಿಭಟನೆ

ನವದೆಹಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್​ ಹೊಸ ತಂತ್ರ ರೂಪಿಸಿದೆ. ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ನಿರ್ದೇಶಕ ಅಲೋಕ್​ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ತಾರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ದೇಶಾದ್ಯಂತ ಶುಕ್ರವಾರ ಭಾರಿ ಪ್ರತಿಭಟನೆ ನಡೆಸಲು ಕಾಂಗ್ರೆಸ್​ ಸಿದ್ಧತೆ ನಡೆಸಿದೆ.
ನಿರ್ದೇಶಕ ಅಲೋಕ್ ವರ್ಮಾ ಅವರು ಅಕ್ರಮ ನಡೆಸಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವುದುರ ಜತೆಗೆ ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ನಾಗೇಶ್ವರ್​ ರಾವ್​ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಅಲೋಕ್​ ವರ್ಮಾರನ್ನು ಕಿತ್ತೊಗೆದು ಅವರ ಜಾಗಕ್ಕೆ ಭ್ರಷ್ಟ ನಾಗೇಶ್ವರ್​ರನ್ನು ಸರ್ಕಾರ ನೇಮಕ ಮಾಡಿದೆ ಎಂಬುದು ವಿಪಕ್ಷಗಳ ಆರೋಪ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ ದೇಶಾದ್ಯಂತ ಪ್ರತಿಭಟನೆ ನಡೆಸಲಿದೆ ಎನ್ನಲಾಗಿದೆ.

ದೆಹಲಿಯಲ್ಲಿರುವ ಸಿಬಿಐನ ಮುಖ್ಯ ಕಚೇರಿ ಎದುರು ಕಾಂಗ್ರೆಸ್​ನ ಪ್ರಮುಖ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿ ರಾಜ್ಯದ ಕಾಂಗ್ರೆಸ್​ ನಾಯಕರಿಗೆ ಆಯಾ ರಾಜ್ಯಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ಸೂಚನೆ ಬಂದಿದೆ ಎನ್ನಲಾಗಿದೆ. ಈ ವೇಳೆ ಮೋದಿ ಕ್ಷಮೆಯಾಚಿಸುವಂತೆ ಆಗ್ರಹಿಸುವುದರ ಜತೆಗೆ ವರ್ಮಾರನ್ನು ಪುನಃ ಕರೆಸಿಕೊಳ್ಳುವಂತೆ ಕಾಂಗ್ರೆಸ್​ ಆಗ್ರಹಿಸಲಿದೆಯಂತೆ.
ಈ ಮಧ್ಯೆ ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ನಡೆಸುತ್ತಿರುವ ತನಿಖೆಗೆ ವರ್ಮಾ ಸಹಕರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ