ನವದೆಹಲಿ: ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಅಲೋಕ್ ವರ್ಮಾ ಅವರ ದೆಹಲಿಯ ಮನೆ ಎದುರು ಗುರುವಾರ ಬೆಳಗ್ಗೆ ಸಂಶಯಾಸ್ಪದವಾಗಿ ಸುತ್ತಾಡುತ್ತಾ, ಬೇಹುಗಾರಿಕೆ ನಡೆಸುತ್ತಿದ್ದ ನಾಲ್ವರನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಧೀರಜ್ ಕುಮಾರ್, ಅಜಯ್ ಕುಮಾರ್, ಪ್ರಶಾಂತ್ ಹಾಗೂ ವಿನೀತ್ ಕುಮಾರ್ ಗುಪ್ತಾ ಎಂಬ ನಾಲ್ವರು ಗುರುವಾರ ಬೆಳಗ್ಗೆ ಅಲೋಕ್ ವರ್ಮಾ ಮನೆಯ ಸುತ್ತ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದರು. ಇವರನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ವಶಕ್ಕೆ ಪಡೆದಿದ್ದಾರೆ. ಬಂಧಿತರು ತಾವು ಗುಪ್ತಚರ ದಳದ ಸಿಬ್ಬಂದಿ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರ ತಂಡ ಪರಿಶೀಲನೆ ನಡೆಸುತ್ತಿದೆ.
ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಮತ್ತು ಉಪಮುಖ್ಯಸ್ಥ ರಾಕೇಶ್ ಅಸ್ತಾನಾ ನಡುವೆ ನಡೆದ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐ ನಿರ್ದೇಶಕ ಸ್ಥಾನಕ್ಕೆ ಹಂಗಾಮಿಯಾಗಿ ನಾಗೇಶ್ವರ್ ರಾವ್ ಅವರನ್ನು ಮಂಗಳವಾರ ರಾತ್ರಿ ಕೇಂದ್ರ ಸರ್ಕಾರ ನೇಮಿಸಿದೆ. ಕಡ್ಡಾಯ ರಜೆ ಮೇಲೆ ಇರುವ ಅಲೋಕ್ ವರ್ಮಾ ಅವರನ್ನು ಗಮನಿಸುತ್ತಿರುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.