18 ಶಾಸಕರ ಅನರ್ಹತೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಎಐಎಡಿಎಂಕೆಯ 18 ಶಾಸಕರ ಅನರ್ಹತೆ ಕುರಿತು ತೀರ್ಪು ಪ್ರಕಟಿಸಿರುವ ಮದ್ರಾಸ್ ಹೈಕೋರ್ಟ್ ಶಾಸಕರ ಅನರ್ಹತೆ ಕ್ರಮವನ್ನು ಎತ್ತಿಹಿಡಿದಿದ್ದು, ಟಿಟಿವಿ ದಿನಕರನ್ ಬಣಕ್ಕೆ ಭಾರೀ ಹಿನ್ನಡೆಯಾದಂತಾಗಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ 18 ಶಾಸಕರನ್ನು 2017, ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡಿನ ವಿಧಾನಸಭಾ ಸ್ಪೀಕರ್ ಪಿ.ಧನಪಾಲ್ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. 1986ರ ಪಕ್ಷಾಂತರ ವಿರೋಧಿ ಕಾಯಿದೆಯ ನಿಯಮಗಳಡಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದ್ದರು. ನಂತರ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎಂ. ಸುಂದರ್ ಅವರು ಭಿನ್ನ ನಿಲುವು ತಳೆದ ಕಾರಣ ಶಾಸಕತ್ವ ಅನರ್ಹತೆ ಕುರಿತಾದ ಕೇಸನ್ನು ಸುಪ್ರೀಂಕೋರ್ಟ್ ಗೆ ವರ್ಗಾಯಿಸಬೇಕೆಂದು ಕೋರಿ ಎಐಎಡಿಎಂಕೆ ಪಕ್ಷದ 18 ಶಾಸಕರು ಸುಪ್ರೀಂಕೋರ್ಟ್ ಮೊರೆಹೊಗಿದ್ದರು. ನಂತರ ಸುಪ್ರೀಂಕೋರ್ಟ್ ಎಂ. ಸತ್ಯನಾರಾಯಣನ್ ಅವರನ್ನು ಮೂರನೇ ನ್ಯಾಯಮೂರ್ತಿಯನ್ನಾಗಿ ನೇಮಿಸಿತ್ತು.

ಸುಪ್ರೀಕೋರ್ಟ್​ನಿಂದ ನೇಮಕಗೊಂಡಿದ್ದ ನ್ಯಾ. ಎಂ. ಸತ್ಯನಾರಾಯಣ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ಎಐಡಿಎಂಕೆ ಪಕ್ಷದ ನಿರ್ಧಾರವನ್ನು ಎತ್ತಿ ಹಿಡಿದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ