
ಮುಂಬೈ: ಪ್ರತಿಷ್ಠಿತ ದೇಶೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾದಲ್ಲಿ ಮತ್ತೆ ತಿಗಣೆ ಕಾಟ ಆರಂಭವಾಗಿದ್ದು, ಪ್ರಯಾಣಿಕರು ರೋಸಿಹೋಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಕನೋರ್ವನಿಗೆ ತಿಗಣೆ ಕಚ್ಚಿರುವ ಬಗ್ಗೆ ಸಮಾಜಿಕ ತಾಣಗಳಲ್ಲಿ ಚರ್ಚೆಯಾಗಿದೆ. ಜುಲೈನಲ್ಲಿ ನ್ಯೂಯಾರ್ಕ್‌ನಿಂದ ಮುಂಬಯಿಗೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರು ಪ್ರಯಾಣಿಕರು ಕೂಡ ಇದೇ ರೀತಿ ದೂರು ನೀಡಿದ್ದರು.
ಇದೀಗ ಏರ್ ಇಂಡಿಯಾದಲ್ಲಿ ಪ್ರಯಾಣದ ವೇಳೆ ತಿಗಣೆ ಕಚ್ಚಿರುವ ಬಗ್ಗೆ ಮತ್ತೊಂದು ದೂರು ಕೇಳಿ ಬಂದಿದ್ದು, ದೇಶೀಯ ಹಾರಾಟದಲ್ಲಿ ತಿಗಣೆ ಸಮಸ್ಯೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.
ದೆಹಲಿಯಿಂದ ಸಂಜೆ 5.40ಕ್ಕೆ ವಿಮಾನ ಹಾರಾಟ ಆರಂಭಿಸಿತ್ತು. ವಿಮಾನದಲ್ಲಿ ಕುಳಿತ ಬಳಿಕ ಹಲವಾರು ಬಾರಿ ಏನೋ ಕಚ್ಚಿದಂತಹ ಅನುಭವ ಆಗಿತ್ತು. ಅಲ್ಲದೆ ಬೆಂಗಳೂರು ತಲುಪುವ ವರೆಗೂ ತುರಿಕೆ ಹೆಚ್ಚಾಗಿತ್ತು. ಆರಂಭದಲ್ಲಿ ಸೊಳ್ಳೆಗಳಿರಬಹುದು ಎಂದು ಸುಮ್ಮನಿದ್ದೆ. ಹೀಗಾಗಿಯೇ ಗಗನಸಖಿಯರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಮನೆಗೆ ಬಂದು ಶರ್ಟ್ ಬದಲಿಸುವ ವೇಳೆಗೆ ತಿಗಣೆ ಕಚ್ಚಿರುವುದು ಗೊತ್ತಾಗಿದೆ ಎಂದು ಪ್ರಯಾಣಿಕ ರವಿ ಕುಮಾರ್ ವಿವರಿಸಿದ್ದಾರೆ.
ಈ ಕುರಿತು ಏರ್ ಇಂಡಿಯಾ ಸಂಸ್ಥೆಗೆ ದೂರು ನೀಡಿಲ್ಲ. ಆದರೆ ರವಿ ಕುಮಾರ್ ಪುತ್ರಿ, ತಿಗಣೆ ಕಚ್ಚಿರುವ ದೇಹದ ಭಾಗಗಳ ಫೋಟೋಗಳನ್ನು ತೆಗೆದು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಏರ್‌ಇಂಡಿಯಾಗೆ ಈ ಪೋಸ್ಟ್‌ನ್ನು ಟ್ಯಾಗ್ ಮಾಡಿದ್ದಾರೆ. ಆದರೆ ಈ ವರೆಗೆ ಈ ದೂರಿಗೆ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಏರ್ ಇಂಡಿಯಾ ಅಧಿಕಾರಿಗಳೂ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.