ನವದೆಹಲಿ, ಅ.24- ಮಿತಿಮೀರುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ಮಹತ್ವದ ಕ್ರಮಕ್ಕೆ ಮುಂದಾಗಿರುವ ಸುಪ್ರೀಂಕೋರ್ಟ್, 2020ರ ಏಪ್ರಿಲ್ 1ರಿಂದ ಭಾರತ್ ಹಂತ-4(ಭಾರತ್ ಸ್ಟೇಜ್-ಬಿಎಸ್-4)ರ ವಾಹನಗಳ ಮಾರಾಟವನ್ನು ದೇಶದಾದ್ಯಂತ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಇಂಟರ್ನಲ್ ಕಂಬಷನ್(ಆಂತರಿಕ ದಹನಶೀಲ) ಎಂಜಿನ್ಗಳು ಹಾಗೂ ಸ್ಪಾರ್ಕ್ ಇಗ್ನಿಷನ್(ಬೆಂಕಿ ಕಿಡಿಯಿಂದ ಚಾಲನೆಯಾಗುವ) ಎಂಜಿನ್ ಸಾಧನಗಳಿಂದ ಹೊರ ಹೊಮ್ಮುವ ವಾಯು ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಅನುಸರಿಸುವ ಮಾನದಂಡವೇ ಭಾರತ್ ಸ್ಟೇಜ್. ಭಾರತ್ ಹಂತ ಹೊರಸೂಸುವಿಕೆ ಮಾನಕಗಳು(ಭಾರತ್ ಸ್ಟೇಜ್ ಎಮಿಷನ್ ಸ್ಟ್ಯಾಂಡಡ್ರ್ಸ್) ಇದನ್ನು ವಾಯು ಮಾಲಿನ್ಯ ಗುಣಮಟ್ಟ ಪರೀಕ್ಷಿಸಲು ಬಳಸಲಾಗುತ್ತದೆ.
ವಾಹನಗಳ ಮಾಲಿನ್ಯ ತಡೆಗಟ್ಟುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ನೇತೃತ್ವದ ಮೂವರು ಸದಸ್ಯರ ಪೀಠವು 2020ರ ಏಪ್ರಿಲ್ 1ರಿಂದ ಭಾರತ್ ಹಂತ=4(ಭಾರತ್ ಸ್ಟೇಜ್-ಬಿಎಸ್)ರ ವಾಹನಗಳ ಮಾರಾಟವನ್ನು ದೇಶವ್ಯಾಪಿ ಮಾರಾಟ ಮಾಡಬಾರದು. ಆ ಅವಧಿಯಿಂದ ಭಾರತ್ ಹಂತ-6(ಭಾರತ್ ಸ್ಟೇಜ್-ಬಿಎಸ್-6)-6ರ ವಾಹನಗಳನ್ನು ಮಾತ್ರ ಮಾರಾಟ ಮಾಡುವಂತೆ ತಿಳಿಸಿದೆ.
2017ರಿಂದ ಬಿಎಸ್-4 ನಿಯಂತ್ರಣ ನಿಯಮಗಳು ದೇಶದಲ್ಲಿ ಜಾರಿಯಲ್ಲಿದ್ದು, ಭಾರತ್ ಸ್ಟೇಜ್-6 (ಅಥವಾ ಬಿಎಸ್-6) ಧೂಮ ಹೊರಸೂಸುವಿಕೆ ನಿಯಂತ್ರಣ ನಿಯಮಗಳು ಏಪ್ರಿಲ್ 1, 2020ರಿಂದ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಪೀಠವು ತಿಳಿಸಿದೆ.