ಸಿಬಿಐನಲ್ಲಿನ ಆಂತರಿಕ ಕಚ್ಚಾಟ ತಾರಕಕ್ಕೆ, ತಡರಾತ್ರಿ ಮತ್ತೆರಡು ಮಹತ್ವದ ಬೆಳವಣಿಗೆ

ನವದೆಹಲಿ, ಅ.24-ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಕೇಂದ್ರೀಯ ತನಿಖಾ ದಳ-ಸಿಬಿಐನಲ್ಲಿನ ಆಂತರಿಕ ಕಚ್ಚಾಟ ತಾರಕಕ್ಕೇರಿರುವ ಬೆನ್ನಲ್ಲೇ ನಿನ್ನೆ ತಡರಾತ್ರಿ ಮತ್ತೆರಡು ಮಹತ್ವದ ಬೆಳವಣಿಗೆಗಳು ನಡೆದಿವೆ. ಭ್ರಷ್ಟಾಚಾರಗಳ ಆರೋಪ-ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ವಿವಾದಕ್ಕೆ ಗುರಿಯಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ಅವರ ಎಲ್ಲ ಅಧಿಕಾರಿಗಳನ್ನು ಕಿತ್ತುಕೊಂಡಿರುವ ಕೇಂದ್ರ ಸರ್ಕಾರ ಅವರಿಬ್ಬರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ.

ನವದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಇಂದು ಬೆಳಗ್ಗೆ ಬೀಗಮುದ್ರೆ ಹಾಕಲಾಗಿತ್ತು. ಯಾವ ಅಧಿಕಾರಿಗಳು ಅಥವಾ ಹೊರಗಿನವರನ್ನು ಅಲ್ಲಿಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂಬ ವರದಿಯಾಗಿದ್ದರೂ, ನಂತರ ಕಟ್ಟಡವನ್ನು ತೆರೆಯಲಾಗಿದೆ.

ದೇಶದ ಪ್ರತಿಷ್ಠಿತ ತನಿಖಾ ಸಂಸ್ಥೆಯ ಇತಿಹಾಸದಲ್ಲೇ ಇಂಥ ಬೆಳವಣಿಗೆ ನಡೆದಿರುವುದು ಇದೇ ಮೊದಲು. ಈ ಬೆಳವಣಿಗೆಗಳೊಂದಿಗೆ ಸಿಬಿಐ ಆಂತರಿಕ ಕಲಹ ಮತ್ತೊಂದು ತಿರುವು ಪಡೆದುಕೊಂಡಂತಾಗಿದೆ.

ಸಿಬಿಐ ಜಂಟಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಈ ಸಂಬಂಧ ನಿನ್ನೆ ಮಧ್ಯರಾತ್ರಿ ಆದೇಶ ಹೊರಡಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ನೇಮಕಾತಿ ಸಮಿತಿ ಆದೇಶವೊಂದನ್ನು ಹೊರಡಿಸಿದ್ದು, ಅಲೋಕ್ ಮತ್ತು ಅಸ್ತಾನ ಅವರ ಎಲ್ಲ ಅಧಿಕಾರಿಗಳನ್ನು ವಾಪಸ್ ಪಡೆಯಲಾಗಿದೆ ಹಾಗೂ ಅವರನ್ನು ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ. ಇದೇ ವೇಳೆ ಜಂಟಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರನ್ನು ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸಿಬಿಐಗೆ ಮಧ್ಯಂತರ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ಸಿಬಿಐನ ಅತ್ಯುನ್ನತ ಅಧಿಕಾರಿಗಳ ಕಿತ್ತಾಟ ಈಗ ಹಾದಿರಂಪ ಬೀದಿರಂಪ ಆಗಿರುವುದು ಪ್ರತಿಷ್ಠಿತ ತನಿಖಾ ಸಂಸ್ಥೆಗೆ ಕಪ್ಪು ಚುಕ್ಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದೇ ವೇಳೆ, ಭ್ರಷ್ಟಾಚಾರ ಮತ್ತು ಲಂಚ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಮತ್ತೊಬ್ಬ ಉನ್ನತಾಧಿಕಾರಿ ಎ.ಕೆ.ಶರ್ಮ ಸೇರಿದಂತೆ ಎಲ್ಲ ಮೂವರು ಹೆಚ್ಚುವರಿ ನಿರ್ದೇಶಕರನ್ನು ಸಹ ಸರ್ಕಾರ ಮೂಲೆ ಗುಂಪು ಮಾಡಿದ್ದು, ಅವರ ಅಧಿಕಾರಗಳೂ ಸಹ ಮೊಟುಕಿಗೊಂಡಿವೆ.

ದೆಹಲಿಯಲ್ಲಿರುವ ಸಿಬಿಐ ಕೇಂದ್ರ ಕಚೇರಿಗೆ ಬೀಗ ಜಡಿಯಲಾಗಿದ್ದು(ಸೀಲ್), ಕೆಲವು ಅಧಿಕಾರಿಗಳು ಕಚೀರಿ ಒಳಗೇ ಇದ್ದಾರೆ ಎಂದು ಹೇಳಲಾಗಿತ್ತು. ಸಿಬಿಐ ಕಚೇರಿಗೆ ಇತರ ಯಾವ ಅಧಿಕಾರಿಗಳು ಮತ್ತು ಹೊರಗಿನವರನ್ನು ಬಿಡುತ್ತಿರಲಿಲ್ಲ ಎಂದು ವರದಿಯಾಗಿತ್ತು. ಆದಾಗ್ಯೂ ನಂತರ ಕಟ್ಟಡವನ್ನು ತೆರೆಯಲಾಗಿದೆ.

ಸಿಬಿಐ ಇತಿಹಾಸದಲ್ಲೇ ಕಂಡು ಕೇಳರಿಯದ ಬೆಳವಣಿಗೆಗಳಿಂದ ಕೇಂದ್ರೀಯ ತನಿಖಾ ದಳದ ಹೆಸರಿಗೆ ಕಳಂಕ ಅಂಟಿದೆ. ಸಂಸ್ಥೆಯ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪಗಳ ಸಂಬಂಧದಲ್ಲಿ ತಮ್ಮ ವಿರುದ್ಧ ಕಾನೂನು ಕ್ರಮಗಳನ್ನು ಪ್ರಶ್ನಿಸಿ ಅಸ್ತಾನ ಮತ್ತು ಸಿಬಿಐ ಉಪ ಪೆÇಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ದೇವೇಂದರ್ ಕುಮಾರ್ ನಿನ್ನೆ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಅ.29ರವರಗೆ ಅಸ್ತಾನ ಅವರಿಗೆ ರಿಲೀಪ್ ದೊರೆತಿದೆ.
ಮಾಂಸ ರಫ್ತುದಾರ ಮೊಹಿನ್ ಖುರೇಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕುಮಾರ್ ತನಿಖಾಧಿಕಾರಿಯಾಗಿದ್ದರು. ಇದೇ ಪ್ರಕರಣದಿಂದ ಪಾರಾಗಲು ಲಂಚ ಹಣ ನೀಡಿದ್ದ ಉದ್ಯಮಿ ಸತೀಶ್ ಸನಾ ಅವರ ಹೇಳಿಕೆಗಳನ್ನು ತಿರುಚಿದ್ದ ಸಂಬಂಧ ನಿನ್ನೆ ಸಿಬಿಐ, ಕುಮಾರ್ ಅವರನ್ನು ಬಂಧಿಸಿತ್ತು.

ಇದೇ ವೇಳೆ ಭ್ರಷ್ಟಾಚಾರ ಆರೋಪ ಮಾಡಿರುವ ಆಸ್ತಾನ ವಿರುದ್ದವೇ 3 ಕೋಟಿ ರೂ. ಲಂಚ ಪಡೆದ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಲೋಲ್ ವರ್ಮಾ 10 ಪ್ರಕರಣಗಳಲ್ಲಿ ಹಲವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಆಸ್ತಾನ ಕೇಂದ್ರ ಸಂಪುಟ ಕಾರ್ಯದರ್ಶಿ ಮತ್ತು ಜಾಗೃತ ಆಯೋಗಕ್ಕೆ ಪತ್ರ ಬರೆದಿದ್ದರು.

ಮಾಂಸ ರಫ್ತುದಾರ ಮೊಹಿನ್ ಖುರೇಷಿ ತನಿಖೆ ಪ್ರಕರಣದಲ್ಲಿ ಉದ್ಯಮಿ ಸತೀಶ್ ಅವರನ್ನು ಬಿಡುಗಡೆಗೊಳಿಸಲು ಅವರಿಂದ ಆಗಸ್ಟ್ 24ರಂದು ವರ್ಮ 2 ಕೋಟಿ ರೂ.ಗಳ ಲಂಚ ಪಡೆದಿದ್ದಾರೆ ಎಂದು ಆಸ್ತಾನ ಆಪಾದಿಸಿದ್ದರು. ನಿರ್ದೇಶಕರಿಂದ ನೀತಿ ನಿಯಮಗಳು ಉಲ್ಲಂಘನೆಯಾಗಿವೆ ಎಂದು ಸಹ ಆರೋಪಿಸಿದ್ದರು.

ವಿಶೇಷ ತನಿಖಾ ತಂಡದ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಧ್ಯವರ್ತಿಗೆ ಲಂಚ ನೀಡಿದ್ದೆ ಎಂಬ ಉದ್ಯಮಿ ಹೇಳಿಕೆ ಆಧಾರದ ಮೇಲೆ ಸಿಬಿಐ ಅಸ್ತಾನ ಮತ್ತು ಅವರ ಆಪ್ತ ದೇವೇಂದರ್ ಕುಮಾರ್ ಮತ್ತು ಇನ್ನಿಬ್ಬರು ಮಧ್ಯವರ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿತ್ತು,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ