ನವದೆಹಲಿ, ಅ.24-ಸಿಬಿಐನ ಅತ್ಯುನ್ನತ ಅಧಿಕಾರಿಗಳಾದ ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ತಾನ ಅವರ ಕಿತ್ತಾಟದಿಂದಾಗಿ ಅಂಟಿಕೊಂಡಿರುವ ಕಳಂಕವನ್ನು ಅಳಿಸಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ನಿಟ್ಟಿನಲ್ಲಿ ಕೇಂದ್ರೀಯ ತನಿಖಾ ದಳಕ್ಕೆ ಮೇಜರ್ ಸರ್ಜರಿ ಮಾಡಿರುವ ಸರ್ಕಾರ, ಮಹತ್ವದ ಹುದ್ದೆಗಳನ್ನು ಪುನರ್ ರಚಿಸಿದೆ.
ಅಲೋಕ್ ಮತ್ತು ಅಸ್ತಾನ ಅವರ ಎಲ್ಲಾ ಅಧಿಕಾರಗಳನ್ನು ಮೊಟಕುಗೊಳಿಸಿ ಅವರಿಬ್ಬರನ್ನು ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿರುವ ಸರ್ಕಾರ, ಒಡಿಸ್ಸಾ ಕೇಡರ್ನ 1986ರ ಐಪಿಎಸ್ ಅಧಿಕಾರಿ ಹಾಗೂ ಸಿಬಿಐನ ಜಂಟಿ ನಿರ್ದೇಶಕ ಎಂ.ನಾಗೇಶ್ವರರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಅಲ್ಲದೆ, ತನಿಖಾಧಿಕಾರಿಯಿಂದ ಹಿಡಿದು ಉನ್ನತಾಧಿಕಾರಿ ಮಟ್ಟದವರೆಗೂ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ.
ಈ ಹಿಂದೆ ಆಸ್ತಾನ ನಡೆಸುತ್ತಿದ್ದ ತನಿಖೆಯನ್ನು ಮುಂದುವರೆಸಲು ಸಿಬಿಐ ಪೆÇಲೀಸ್ ವರಿಷ್ಠಾಧಿಕಾರಿ ಸತೀಸ್ ದಾಗರ್ ಅವರನ್ನು ನಿನ್ನೆ ರಾತ್ರಿ ನೇಮಕ ಮಾಡಿದೆ.
ಈ ಹಿಂದೆ ಮಧ್ಯಪ್ರದೇಶದ ವ್ಯಾಪಂ ಹಗರಣದ ತನಿಖೆ ನೇತೃತ್ವ ವಹಿಸಿದ್ದ ಡಿಐಜಿ ತರುಣ್ ಗೌಬಾ ಅವರನ್ನು ಪ್ರಥಮ ಮೇಲ್ವಿಚಾರಣಾ ಉನ್ನತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಜಂಟಿ ನಿರ್ದೇಶಕರಾಗಿ ವಿ.ಮುರುಗೇಶನ್ ಅವರನ್ನು ಸಿಬಿಐಗೆ ಸೇರಿಸಿಕೊಳ್ಳಲಾಗಿದೆ.
ಅಲ್ಲದೆ, ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದು ಮೂಲಗಳ ಪ್ರಕಾರ ಇತರ 13 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.