ಪಕ್ಷದ ಅನುಮತಿ ಇಲ್ಲದೆ ಪ್ರಚಾರ ಮಾಡದಂತೆ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಹೈಕಮಾಂಡ್ ಸೂಚನೆ

ಬೆಂಗಳೂರು, ಅ.24-ಒಂದು ವೇಳೆ ಬಳ್ಳಾರಿಗೆ ಕಾಲಿಡಲು ನ್ಯಾಯಾಲಯ ಅನುಮತಿ ನೀಡಿದರೂ ಪಕ್ಷದ ಅನುಮತಿ ಇಲ್ಲದೆ ಪ್ರಚಾರ ನಡೆಸಬಾರದೆಂದು ಮಾಜಿ ಸಚಿವ, ಗಣಿ ಧಣಿ ಜನಾರ್ಧನರೆಡ್ಡಿಗೆ ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತನ್ನ ಸ್ನೇಹಿತ ಶ್ರೀರಾಮುಲು, ಸಹೋದರಿ ಜೆ.ಶಾಂತಾ ಪರ ಜಿಲ್ಲೆಯಲ್ಲಿ ಪ್ರಚಾರ ನಡೆಸಲು ರೆಡ್ಡಿ ತೆರೆಮರೆಯಲ್ಲಿ ಸಜ್ಜಾಗಿದ್ದರು.

ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿದೆ. ಜಿಲ್ಲೆಯಲ್ಲಿ ಪ್ರಚಾರ ನಡೆಸಲು ಅನುಮತಿ ನೀಡುವಂತೆ ವಕೀಲರ ಮೂಲಕ ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸಜ್ಜಾಗಿದ್ದರು. ಹಾಗೊಂದು ವೇಳೆ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದರೂ ಪಕ್ಷದ ಒಪ್ಪಿಗೆ ಇಲ್ಲದೆ ಪ್ರಚಾರಕ್ಕೆ ಹೋಗಬಾರದೆಂದು ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಉಪಚುನಾವಣೆಯಲ್ಲಿ ರೆಡ್ಡಿ ಬಿಜೆಪಿ ಪರ ಪ್ರಚಾರ ನಡೆಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಪಕ್ಷದ ಮೇಲೆ ಮುಗಿಬೀಳುವ ಸಂಭವವಿದೆ. ಇದು ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಬೀಳಬಹುದು. ಪಕ್ಷದಲ್ಲಿ ಯಾವುದೇ ತೀರ್ಮಾನವಾಗಬೇಕಾದರೂ ರಾಷ್ಟ್ರೀಯ ನಾಯಕರ ಸೂಚನೆ ಇಲ್ಲದೆ ನಡೆದುಕೊಳ್ಳಬಾರದೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರೆಡ್ಡಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಗಳ ಉಸ್ತುವಾರಿ ನೀಡುವಂತೆ ನಾಯಕರಿಗೆ ಮನವಿ ಮಾಡಿದ್ದರು. ಅಲ್ಲದೆ, ಮೊಳಕಾಲ್ಮೂರಿನಿಂದ ಸ್ಪರ್ಧಿಸಿದ್ದ ರಾಮುಲು ಪರ ಪ್ರಚಾರ ನಡೆಸಲು ಸಮೀಪದಲ್ಲಿ ಮನೆಯನ್ನೂ ಮಾಡಿದ್ದರು. ಯಾವಾಗ ರೆಡ್ಡಿ ಬಿಜೆಪಿ ಪರ ಪ್ರಚಾರ ಮಾಡಲು ಸಜ್ಜಾಗಿದ್ದರೋ ಕಾಂಗ್ರೆಸ್ ಮತ್ತು ಜೆಡಿಎಸ್ ಇದನ್ನೇ ಅಸ್ತ್ರ ಮಾಡಿಕೊಂಡು ಕಮಲದ ನಾಯಕರ ಮೇಲೆ ಟೀಕಾ ಪ್ರಹಾರ ನಡೆಸಿದ್ದರು.
ಇದರಿಂದ ಎಚ್ಚೆತ್ತುಕೊಂಡ ಅಮಿತ್ ಷಾ, ರೆಡ್ಡಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪಕ್ಷದ ಅನುಮತಿ ಇಲ್ಲದೆ ಅವರು ಪ್ರಚಾರ ನಡೆಸುವಂತಿಲ್ಲ ಎಂದು ಸೂಚನೆ ನೀಡಿದ್ದರು. ಹೀಗಾಗಿ ರೆಡ್ಡಿ ಪ್ರಚಾರದಿಂದ ದೂರ ಉಳಿದಿದ್ದರು.

ಅನಂತ್‍ಕುಮಾರ ಹೆಗಡೆಯೂ ದೂರ:
ತನ್ನ ವಿವಾದಾತ್ಮಕ ಮಾತುಗಳಿಂದಲೇ ವಿರೋಧ ಪಕ್ಷದ ನಾಯಕರ ಮೇಲೆ ಸದಾ ಬೆಂಕಿ ಉಗುಳುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆಗೆ ಉಪಚುನಾವಣೆಯಲ್ಲಿ ಪ್ರಚಾರ ನಡೆಸದಂತೆ ಪಕ್ಷ ಬ್ರೇಕ್ ಹಾಕಿದೆ.
ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹೆಗ್ಡೆ ಯಾವುದಾದರೊಂದು ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರಬಹುದೆಂಬ ಹಿನ್ನೆಲೆಯಲ್ಲಿ ಹೈಕಮಾಂಡ್ ವರಿಷ್ಠರು ಪ್ರಚಾರದಿಂದಲೇ ದೂರ ಉಳಿಯುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹೆಗ್ಡೆ ಕೆಲವು ಸಾಹಿತಿಗಳು ಹಾಗೂ ಸಂವಿಧಾನ ಬದಲಾವಣೆ ಕುರಿತಂತೆ ಹೇಳಿದ ವಿವಾದಾತ್ಮಕ ಹೇಳಿಕೆಗಳಿಂದ ಬಿಜೆಪಿಗೆ ಮುಜುಗರವಾಗಿತ್ತು. ಹೀಗಾಗಿ ಈ ಬಾರಿ ಅವರನ್ನು ಪ್ರಚಾರದಿಂದಲೇ ದೂರ ಇಡುವಂತೆ ರಾಜ್ಯ ನಾಯಕರೇ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಉಪಚುನಾವಣೆ ಕಾವು ರಂಗೇರಿದ್ದರೂ ಹೆಗ್ಡೆಯ ಸುಳಿವೇ ಇಲ್ಲದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ