ಬೆಂಗಳೂರು,ಅ.24- ನಾನು ಇನ್ನು ಪರಿಪೂರ್ಣವಾಗಿ ಬೆಳೆದಿಲ್ಲ. ಜೀವನದಲ್ಲಿ ಸಾಧಿಸುವುದು ಬಹಳಷ್ಟು ಇದೆ ಎಂದು ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ಅಭಿಪ್ರಾಯಪಟ್ಟರು.
ಬಸವೇಶ್ವರನಗರದ ಗಂಗಮ್ಮ-ತಿಮ್ಮಯ್ಯ ಕನ್ವೆಂಷನ್ ಸೆಂಟರ್ನಲ್ಲಿ ಆಯೋಜಿಸಿದ್ದ ನಮ್ಮೊಳಗೊಬ್ಬ ರವಿ.ಡಿ. ಚನ್ನಣ್ಣನವರ್ ಪುಸ್ತಕ ಲೋಕಾರ್ಪಣೆ ನಂತರ ಮಾತನಾಡಿದರು.
ನಾನು ಇಂದು ಈ ಸ್ಥಾನಕ್ಕೆ ಬರಲು ನನ್ನ ಹೆತ್ತ ತಾಯಿ ರತ್ನಮ್ಮ ಮತ್ತು ಗದಗದ ರಾಮಕೃಷ್ಣ ಆಶ್ರಮದ ಶ್ರೀ ನಿರ್ಭಯಾನಂದ ಸರಸ್ವತೀ ಸ್ವಾಮೀಜಿ ಕಾರಣಕರ್ತರು ಎಂದು ಸ್ಮರಿಸಿದರು.
ನನ್ನನು ತಿದ್ದಿ, ತೀಡಿ ಮಾರ್ಗದರ್ಶನ ನೀಡಿದ ಸ್ವಾಮೀಜಿಗಳನ್ನು ಈಗಲೂ ಪ್ರತಿನಿತ್ಯ ನೆನೆಯುತ್ತಾ ಜೀವನ ನಡೆಸುತ್ತಿದ್ದೇನೆ. ಅಂಥವರ ಮಾರ್ಗದರ್ಶನ ಸಿಕ್ಕಿದ್ದು ನನ್ನ ಭಾಗ್ಯ ಎಂದರು.
ನಮ್ಮಂಥವರು(ಅಧಿಕಾರಿಗಳು) ಸಮಾಜದಲ್ಲಿನ ದೀನದಲಿತರು ಸೇರಿದಂತೆ ಅಗತ್ಯವುಳ್ಳವರಿಗೆ ಎಲ್ಲ ರೀತಿಯ ನೆರವು ನೀಡಬೇಕು. ಆಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಐಪಿಎಸ್ ಅಧಿಕಾರಿ ರವಿ.ಡಿ ಚನ್ನಣ್ಣನವರ್ ಬರೀ ವ್ಯಕ್ತಿಯಲ್ಲ. ಅವರೊಬ್ಬ ಶಕ್ತಿ ಎಂದು ಲೇಖಕ ಯರ್ರಪ್ಪ ಗೌಡ ಚಾನಾಳ್ ನುಡಿದರು.
ಅಂದು ಕಿತ್ತು ತಿನ್ನುವ ಬಡತನ, ಹಳ್ಳಿಯ ಹಿನ್ನಲೆಯಿಂದ ಬಂದ ರವಿ ಇಂದು ನಮ್ಮೆಲ್ಲರ ಹೆಮ್ಮೆಯ ಐಪಿಎಸ್ ಅಧಿಕಾರಿ ಎಂದರು.
ಪೆÇಲೀಸ್ ಅಧಿಕಾರಿಯಾಗಿ, ಶಿಕ್ಷಕನಾಗಿ ಕಾರ್ಯ ನಿರ್ವಹಿಸುವ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಅವರು ಇತರರಿಗೆ ಮಾರ್ಗದರ್ಶಿ ಎಂದು ತಿಳಿಸಿದರು.
ಲೇಖಕ ಯರ್ರಪ್ಪ ಗೌಡ ಬರೆದ ನಮ್ಮೊಳಗೊಬ್ಬ ರವಿ .ಡಿ. ಚನ್ನಣ್ಣನವರ್ ಪುಸ್ತಕವನ್ನು ಮುಖ್ಯ ಪೆÇಲೀಸ್ ಪೇದೆ ಎನ್.ಚಂದ್ರು ಲೋಕಾರ್ಪಣೆಗೊಳಿಸಿದರು.
ವಿಜಯಪುರದ ಶ್ರೀ ನಿರ್ಭಯಾನಂದ ಸರಸ್ವತೀ ಸ್ವಾಮೀಜಿ. ಕಸಾಪ ಅಧ್ಯಕ್ಷ ಮನುಬಳಿಗಾರ್, ಮುದ್ರಕ ಸ್ವಾನ್ ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.