ನವದೆಹಲಿ/ಸಿಯೋಲ್, ಅ.24-ಅಂತಾರಾಷ್ಟ್ರೀಯ ಸಹಕಾರ ವೃದ್ದಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ವೃದ್ದಿಗಾಗಿ ಮಹತ್ವದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಧನೆಯನ್ನು ಪರಿಗಣಿಸಿ ದಕ್ಷಿಣ ಕೊರಿಯಾ ಪ್ರತಿಷ್ಠಿತ 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪರಿಸರ ಸಂರಕ್ಷಣೆಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ವಿಶ್ವಸಂಸ್ಥೆಯ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ಪುರಸ್ಕಾರಕ್ಕೆ ಮೋದಿ ಭಾಜನರಾದ ಬೆನ್ನಲ್ಲೇ ಏಷ್ಯಾ ಖಂಡದ ಮತ್ತೊಂದು ಅತ್ಯುನ್ನತ ಗೌರವಕ್ಕೆ ಪ್ರಧಾನಿ ಪಾತ್ರರಾಗಲಿದ್ದಾರೆ.
ಅಂತಾರಾಷ್ಟ್ರೀಯ ಸಹಕಾರ ಸುಧಾರಣೆ, ಜಾಗತಿಕ ಆರ್ಥಿಕ ಪ್ರಗತಿ ಉನ್ನತೀಕರಣ, ವಿಶ್ವದ ಕ್ಷಿಪ್ರ ಬೆಳವಣಿಗೆಯ ಬೃಹತ್ ಆರ್ಥಿಕತೆಯಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ಮೂಲಕ ಭಾರತೀಯರ ಮಾನವ ಸಂಪನ್ಮೂಲ ಅಭಿವೃದ್ದಿಗೆ ಚಾಲನೆ ಹಾಗೂ ಭ್ರಷ್ಟಾಚಾರ ನಿಗ್ರಹ ಮತ್ತು ಸಾಮಾಜಿಕ ಏಕತೆಗಾಗಿ ಮೋದಿ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಸಿಯೋಲ್ ಪೀಸ್ ಪ್ರೈಜ್ ಕಮಿಟಿ ಈ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಸಿರಿವಂತರು ಮತ್ತು ಬಡವರ ನಡುವೆ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ಕಡಿಮೆ ಮಾಡಲು ಮೋದಿನೋಮಿಕ್ಸ್ (ಮೋದಿ ಆರ್ಥಿಕ ಸೂತ್ರ) ಜಾರಿಗೊಳಿಸಿ ಭಾರತೀಯ ಮತ್ತು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಪ್ರಧಾನಿ ಅವರು ಗಮನಾರ್ಹ ಕೊಡಗೆ ನೀಡಿದ್ದಾರೆ. ಇದನ್ನು ಪ್ರಶಸ್ತಿ ಸಮಿತಿ ಪರಿಗಣಿಸಿ 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ಕುಮಾರ್ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.