ಮಹಾತ್ಮರನ್ನು ಸಮುದಾಯ ಮತ್ತು ಪಕ್ಷಗಳಿಗೆ ಸೀಮಿತ, ಇದರಿಂದ ಇತಿಹಾಸದಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಸಚಿವ ಖರ್ಗೆ

ಬೆಂಗಳೂರು, ಅ.24- ಮಹರ್ಷಿ ವಾಲ್ಮೀಕಿ, ಭಗವಾನ್ ಬುದ್ಧ, ಬಸವಣ್ಣ ಸೇರಿದಂತೆ ಮಹಾತ್ಮರನ್ನು ಸಮುದಾಯ, ಪಕ್ಷಗಳಿಗೆ ಸೀಮಿತಗೊಳಿಸಿರುವುದರಿಂದ ಇತಿಹಾಸದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದಲ್ಲಿಂದು ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ದಲಿತ ಸಮುದಾಯಕ್ಕೆ, ಶ್ರೀರಾಮನನ್ನು ಬಿಜೆಪಿಗೆ, ವಾಲ್ಮೀಕಿ ಅವರನ್ನು ಎಸ್‍ಟಿ ಸಮುದಾಯಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಅವರು ಎಲ್ಲ ವರ್ಗ, ಸಮಾಜಗಳಿಗೆ ಉತ್ತಮ ಸಂದೇಶ ನೀಡಿದ್ದಾರೆ.

ನಮ್ಮ ಮನಸ್ಸಿನಲ್ಲಿ ಬದಲಾವಣೆ ತಂದಾಗ ಸಮಾಜದಲ್ಲೂ ಬದಲಾವಣೆ ತರಲು ಸಾಧ್ಯ.ಆಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನುಡಿದಂತೆ ಪ್ರಾಮಾಣಿಕವಾಗಿ ನಡೆಯುತ್ತಿದೆ.ರೈತರ ಸಾಲಮನ್ನಾ ಮಾಡಲು ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವಗಳ ಮೇಲೆ ಪ್ರಾಮಾಣಿಕವಾಗಿ ಆಡಳಿತ ನಡೆಸುವ ಪ್ರಯತ್ನ ಮಾಡಲಾಗುತ್ತಿದೆ. ಉತ್ತಮ ಸಮಾಜ ಕಟ್ಟಲು ಹಾಗೂ ಜನಪ್ರತಿನಿಧಿಗಳು ಹೇಗಿರಬೇಕೆಂಬುದು ರಾಮಾಯಣದಲ್ಲಿದೆ.ಆದರೆ, ಅವುಗಳನ್ನು ಅಳವಡಿಸಿಕೊಳ್ಳುವ ಇಚ್ಛಾಶಕ್ತಿ ಕೊರತೆ ಇದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಈ ಬಾರಿಯ ವಾಲ್ಮೀಕಿ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.ಏಕೆಂದರೆ, 1984-85ರಲ್ಲಿ ನಾಯಕ ವಾಲ್ಮೀಕಿ ಸಮುದಾಯ ಎಸ್‍ಟಿ ವರ್ಗಕ್ಕೆ ಸೇರಲು ಅವರು ಹೋರಾಟ ಮಾಡಿದ್ದಾರೆ.ಅಲ್ಲದೆ, ವಾಲ್ಮೀಕಿ ಗುರುಪೀಠ ಸ್ಥಾಪನೆಗೂ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
ಈ ಪ್ರಶಸ್ತಿ ವಾಲ್ಮೀಕಿ/ನಾಯಕ ಸಮುದಾಯ ಎಸ್‍ಟಿಗೆ ಸೆರಲು ಹೋರಾಟ ಮಾಡಿದವರಿಗೆ ಸಲ್ಲಬೇಕೆಂದು ದೇವೇಗೌಡರು ಹೇಳಿದ್ದಾರೆಂದು ಸಚಿವರು ತಿಳಿಸಿದರು.

ವಸತಿ ಶಾಲೆಗಳ ಕಟ್ಟಡಕ್ಕಾಗಿ ನಾಲ್ಕುವರೆ ಸಾವಿರ ಕೋಟಿ ರೂ.ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ.ಸಾಕಷ್ಟು ಬೇಡಿಕೆಗಳಿದ್ದು, ಸಿಎಂ ಅವರೊಂದಿಗೆ ಅವುಗಳ ಬಗ್ಗೆ ಸಮಾಲೋಚನೆ ನಡೆಸುವ ಭರವಸೆ ನೀಡಿದರು.
50 ಲಕ್ಷ ಎಸ್‍ಟಿ ಜನಸಂಖ್ಯೆಯಿದ್ದು, ಪ್ರಸಕ್ತ ಸಾಲಿನಲ್ಲಿ ಒಂದೂವರೆ ಸಾವಿರ ಕೋಟಿ ರೂ.ಮಾತ್ರ ಅನುದಾನ ಒದಗಿಸಲಾಗಿದೆ.ಎಸ್‍ಸಿ/ಎಸ್‍ಟಿ ಸಮುದಾಯಕ್ಕೆ 30 ಸಾವಿರ ಕೋಟಿ ರೂ.ಅನುದಾನ ಒದಗಿಸಲಾಗಿದೆಯಾದರೂ ವಾಸ್ತವವಾಗಿ 6 ಸಾವಿರ ಕೋಟಿ ರೂ.ಮಾತ್ರ ದೊರೆತಿದೆ ಎಂದರು.
ಎಸ್‍ಸಿ/ಎಸ್‍ಟಿ ಸಮುದಾಯ ಮುಖ್ಯವಾಹಿನಿಗೆ ತರಲು ಸಾಕಷ್ಟು ಬೇಡಿಕೆಗಳಿವೆ. ಅವುಗಳ ಬಗ್ಗೆ ಸಿಎಂ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.

ರಾಮಾಯಣ ಮಾನವ ಕುಲಕ್ಕೆ ದಾರಿದೀಪವಾಗಿದ್ದು, ರಾಮರಾಜ್ಯ ಆಸ್ತಿತ್ವಕ್ಕೆ ತರುವ ಪ್ರಯತ್ನ ಮಾಡಬೇಕಿದೆ ಎಂದರು.
ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ನ್ಯಾ.ನಾಗಮೋಹನ್‍ದಾಸ್ ಮಾತನಾಡಿ, ರಾಮಾಯಣದಲ್ಲಿರುವ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡರೆ ರಾಮರಾಜ್ಯ ಕಟ್ಟಬಹುದು. ರಾಮರಾಜ್ಯದ ಕಲ್ಪನೆ ಎಂದರೆ ಎಲ್ಲ ಜೀವರಾಶಿಗಳಿಗೂ ನ್ಯಾಯ ಒದಗಿಸುವ ವ್ಯವಸ್ಥೆ ರಾಮಾಯಣದಲ್ಲಿರುವಾಗ ನೈತಿಕ ಮೌಲ್ಯಗಳನ್ನು ಜನರು ಮೈಗೂಡಿಸಿಕೊಂಡರೆ ನಾಡಿಗೆ ಒಳ್ಳೆಯದಾಗಲಿದೆ.

ಕುವೆಂಪು ಪ್ರಶಸ್ತಿಯನ್ನು ಒಕ್ಕಲಿಗರಿಗೆ, ಕನಕ ಪ್ರಶಸ್ತಿಯನ್ನು ಕುರುಬರಿಗೆ, ಬಸವಣ್ಣ ಪ್ರಶಸ್ತಿಯನ್ನು ಲಿಂಗಾಯತರಿಗೆ, ವಾಲ್ಮೀಕಿ ಪ್ರಶಸ್ತಿಯನ್ನು ನಾಯಕ ಜನಾಂಗಕ್ಕೆ ನೀಡುವಂತ ಸಂಪ್ರದಾಯಕ್ಕೆ ಬದಲಾಗಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವ ಮೂಲಕ ದೇವೇಗೌಡರನ್ನು ವಾಲ್ಮೀಕಿ ಸಮುದಾಯಕ್ಕಾಗಿ ಹೋರಾಟದ ಕ್ರಮವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲೂ ವಾಲ್ಮೀಕಿ ಪ್ರಶಸ್ತಿ ನೀಡುವಂತಾಗಬೇಕು.ಇನ್ನೊಂದು ಕಾರ್ಯಕ್ರಮದಲ್ಲಿ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಮನವಿ ಮಾಡಿದರು.

ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯ ಕುಸಿಯುತ್ತಿದೆ.ಮೌಲ್ಯವನ್ನು ಕಟ್ಟಿಕೊಳ್ಳುವ ಸಂದೇಶವೇ ರಾಮಾಯಣದ ಮೂಲ ಆಶಯವಾಗಿದೆ ಎಂದು ಹೇಳಿದರು.
ಮೊರಾರ್ಜಿ ವಸತಿ ಶಾಲೆಯಲ್ಲಿ 10ನೆ ತರಗತಿಯಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕ ಗಳಿಸಿದ ಚಿತ್ರದುರ್ಗದ ಆರ್.ಪ್ರದೀಪ್, ಬೆಳಗಾವಿಯ ದೀಪಾ ನಾಯ್ಕರ್, ತುಮಕೂರಿನ ರವಿತೇಜ ಅವರಿಗೆ ಕ್ರಮವಾಗಿ 5 ಸಾವಿರ, 4500 ಹಾಗೂ 4000 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕುವೆಂಪು ಕಂಡ ವಾಲ್ಮೀಕಿ ಹಾಗೂ ವಾಲ್ಮೀಕಿ ದೃಷ್ಟಿಯಲ್ಲಿ ರಾಜನೀತಿ ಕೃತಿಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಸಮಾರಂಭಕ್ಕೂ ಮುನ್ನ ಬಸವನಗುಡಿಯ ಮಹರ್ಷಿ ವಾಲ್ಮೀಕಿ ಮಹಾ ಆದಿಗುರು ಪೀಠ ಸಂಸ್ಥಾನ ಬೇಡರ ಕಣ್ಣಪ್ಪ ದೇವಸ್ಥಾನದಿಂದ ವಾಲ್ಮೀಕಿ ಜ್ಯೋತಿಯನ್ನು ಮೆರವಣಿಗೆ ಮೂಲಕ ತಂದು ಬಸವೇಶ್ವರ ವೃತ್ತದಿಂದ ವಿವಿಧ ಜನಪದ ಹಾಗೂ ಸಾಂಸ್ಕøತಿಕ ಕಲಾ ತಂಡಗಳು ಹಾಗೂ ಮಂಗಳ ವಾದ್ಯಗಳೊಂದಿಗೆ ಸಾರೋಟ್‍ನಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವಿಟ್ಟು ಮೆರವಣಿಗೆ ನಡೆಸಲಾಯಿತು.

ಶಾಸಕರ ಭವನದ ಮುಂಭಾಗದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಪುಷ್ಪ ನಮನವನ್ನು ಸಚಿವರು, ಗಣ್ಯರು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ರಾಜನಹಳ್ಳಿ.ಯ ವಾಲ್ಮೀಕಿ ಗುರಪೀಠದ ಶ್ರೀ ಪ್ರಸನ್ನನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬಿಬಿಎಂಪಿ ಮೇಯರ್ ಗಂಗಾಂಬಿಕಾ, ಶಾಸಕರಾದ ವೇಣುಗೋಪಾಲ್, ಅರವಿಂದ್‍ಕುಮಾರ್ ಹರಳಿ, ಗೋಪಾಲಕೃಷ್ಣ, ಬಿಬಿಎಂಪಿ ಸದಸ್ಯರಾದ ಕೆ.ನರಸಿಂಹನಾಯ್ಕ, ನೇತ್ರಾ ಪಲ್ಲವಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಸಂಗಪ್ಪ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ನಂದಕುಮಾರ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉಪಯೋಜನೆ ಸಲಹೆಗಾರ ಇ.ವೆಂಕಟಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ