ಬೆಂಗಳೂರು, ಅ.24-ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಹೆಚ್ಚಿನ ಸ್ಥಾನ ಗಳಿಸಲು ಮುಂದಾಗಿರುವ ಬಿಜೆಪಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ಮೈಸೂರು ಎಕ್ಸ್‍ಪ್ರೆಸ್ ಎಂದೇ ಖ್ಯಾತಿಯಾಗಿರುವ ಜಾವಗಲ್ ಶ್ರೀನಾಥ್‍ಗೆ ಗಾಳ ಹಾಕಿದೆ.
ಈಗಾಗಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ, ಗೌತಮ್ ಗಂಭೀರ್ ಸೇರಿದಂತೆ ಕ್ರೀಡಾ ಲೋಕದ ಕೆಲ ದಿಗ್ಗಜರನ್ನು ಪಕ್ಷಕ್ಕೆ ಕರೆತರಲು ನಡೆಸಿರುವ ಪ್ರಯತ್ನಗಳ ನಡುವೆಯೇ ಜಾವಗಲ್ ಶ್ರೀನಾಥ್ ಅವರನ್ನು ಪಕ್ಷಕ್ಕೆ ಸೇರ್ಪಡೆಯಾಗುವಂತೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮನವಿ ಮಾಡಿದ್ದಾರೆ.
ಒಂದು ವೇಳೆ ಜಾವಗಲ್ ಶ್ರೀನಾಥ್ ಬಿಜೆಪಿಗೆ ಸೇರ್ಪಡೆಯಾದರೆ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಹಾಸನದಿಂದ ಕಣಕ್ಕಿಳಿಯುವ ಸಂಭವವಿದೆ.
ಹಾಸನದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹೆಣಗಾಡುತ್ತಿರುವ ಬಿಜೆಪಿ, ಶ್ರೀನಾಥ್ ಅವರನ್ನು ಕಣಕ್ಕಿಳಿಸುವ ಮೂಲಕ ಗೌಡರಿಗೆ ಪ್ರಬಲ ಪೈಪೆÇೀಟಿ ನೀಡಲು ಲೆಕ್ಕಾಚಾರ ಹಾಕಿದೆ ಎಂದು ತಿಳಿದುಬಂದಿದೆ.
ಆದರೆ ಶ್ರೀನಾಥ್ ಈವರೆಗೂ ಪಕ್ಷ ಸೇರ್ಪಡೆ ಕುರಿತಂತೆ ಎಲ್ಲಿಯೂ ಕೂಡ ಬಹಿರಂಗ ಹೇಳಿಕೆಯನ್ನು ನೀಡಿಲ್ಲ. ಆದರೆ ಪಕ್ಷಕ್ಕೆ ಕರೆತರುವ ಸಂಬಂಧ ರಾಷ್ಟ್ರ ಮಟ್ಟದಲ್ಲೇ ಮಾತುಕತೆಗಳು ಮುಂದುವರೆದಿವೆ.
ಜಾವಗಲ್ ಶ್ರೀನಾಥ್ ಪಕ್ಷಕ್ಕೆ ಸೇರಲು ಮುಂದೆ ಬಾರದಿದ್ದರೆ ಡೆಕ್ಕನ್ ಏವಿಯೇಷನ್ ಸಂಸ್ಥೆಯ ಕ್ಯಾಪ್ಟನ್ ಗೋಪಿನಾಥ್, ಮಾಜಿ ಸಚಿವ ಎ.ಮಂಜು ಅವರುಗಳನ್ನು ಸಹ ಬಿಜೆಪಿ ಸೆಳೆಯುವ ಪ್ರಯತ್ನ ನಡೆಸಿದೆ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕ್ರೀಡೆ, ಸಿನಿಮಾ, ಸಾಹಿತ್ಯ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿ ಹೆಚ್ಚಿನ ಸ್ಥಾನ ಗಳಿಸುವುದು ಬಿಜೆಪಿ ಲೆಕ್ಕಾಚಾರವಾಗಿದೆ. ಈಗಾಗಲೇ ಸಿನಿಮಾ ನಟರಾದ ಅಕ್ಷಯ್‍ಕುಮಾರ್, ಅನುಪಮ್ ಖೇರ್ ಸೇರಿದಂತೆ ಸಾಧಕರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದೆ.
ಅಂತಿಮವಾಗಿ ಶ್ರೀನಾಥ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ.