ಉಚ್ಚ ನ್ಯಾಯಾಲಯದ ಎಚ್ಚರಿಕೆಗೆ ಬೆಚ್ಚಿಬಿದ್ದ ಬಿಬಿಎಂಪಿ

ಬೆಂಗಳೂರು, ಅ.24- ರಸ್ತೆ ಗುಂಡಿ ಮುಚ್ಚಲು ಸಾಧ್ಯವಿಲ್ಲದಿದ್ದರೆ ಬಿಬಿಎಂಪಿಯನ್ನೇ ಮುಚ್ಚಿಬಿಡಿ ಎಂಬ ಹೈಕೋರ್ಟ್ ಎಚ್ಚರಿಕೆಗೆ ಬೆಚ್ಚಿಬಿದ್ದಿರುವ ಪಾಲಿಕೆ ಆಡಳಿತ ಇನ್ನು ಮುಂದೆ ರಸ್ತೆಯಲ್ಲಿ ಗುಂಡಿ ಬೀಳದಿರುವಂತೆ ಎಚ್ಚರ ವಹಿಸುವ ಹೊಣೆಯನ್ನು ವಾರ್ಡ್ ಮಟ್ಟದ ಎಇ, ಎಇಇಗಳಿಗೆ ವಹಿಸಲು ಗಂಭೀರ ಚಿಂತನೆ ನಡೆಸಿದೆ.
ನಗರದ ಬಹುತೇಕ ರಸ್ತೆಗಳನ್ನು ಬೃಹತ್ ರಸ್ತೆ ಕಾಮಗಾರಿ ವಿಭಾಗದಿಂದಲೇ ನಿರ್ವಹಿಸಲಾಗುತ್ತಿದೆ.ಈ ವಿಭಾಗದಲ್ಲಿ ಬೆರಳೆಣಿಕೆಯಷ್ಟು ಎಇ, ಎಇಇಗಳು ಮಾತ್ರ ಇದ್ದಾರೆ. ಹೀಗಾಗಿ ಎಲ್ಲಿ ರಸ್ತೆ ಗುಂಡಿ ಬೀಳಲಿದೆ ಎಂಬ ಬಗ್ಗೆ ಸಮರ್ಪಕ ಮಾಹಿತಿ ದೊರೆಯುತ್ತಿಲ್ಲ ಹಾಗೂ ಗುಂಡಿ ಮುಚ್ಚುವ ಹೊಣೆ ಹೊರಬೇಕಾದ ಗುತ್ತಿಗೆದಾರರು ಗುಂಡಿ ಮುಚ್ಚುವ ಗೋಜಿಗೆ ಹೋಗದಿರುವುದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿದೆ.

ಈ ಅಂಶವನ್ನು ಗಮನಿಸಿರುವ ಮೇಯರ್ ಗಂಗಾಂಬಿಕೆ ಅವರು ಬೃಹತ್ ರಸ್ತೆ ಕಾಮಗಾರಿ ವಿಭಾಗದಲ್ಲಿರುವ ಎಂಜಿನಿಯರ್‍ಗಳನ್ನು ಹೊರತುಪಡಿಸಿ ವಾರ್ಡ್ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಇ, ಎಇಇಗಳಿಗೆ ರಸ್ತೆ ಉಸ್ತುವಾರಿ ವಹಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.
ಆಯಾ ವಾರ್ಡ್‍ಗಳಲ್ಲಿ ಕರ್ತವ್ಯ ನಿರ್ವಹಿಸುವ ಎಇ, ಎಇಇಗಳು ಪ್ರತಿನಿತ್ಯ ಅದೇ ಪ್ರದೇಶದಲ್ಲಿ ಓಡಾಡುವುದರಿಂದ ಯಾವ ರಸ್ತೆಯಲ್ಲಿ ಗುಂಡಿ ಬಿದ್ದಿದೆ, ಆ ಗುಂಡಿ ಮುಚ್ಚುವ ಹೊಣೆ ಯಾವ ಗುತ್ತಿಗೆದಾರರದ್ದು ಎಂಬುದನ್ನು ಪತ್ತೆಹಚ್ಚಬಹುದಾಗಿದೆ.ಹೀಗಾಗಿ ಬೃಹತ್ ರಸ್ತೆಗಳು, ಉಪರಸ್ತೆಗಳಲ್ಲಿ ಗುಂಡಿ ಬೀಳದಂತೆ ನೋಡಿಕೊಳ್ಳುವ ಉಸ್ತುವಾರಿಯನ್ನು ಅವರಿಗೆ ನೀಡುವ ಸಾಧ್ಯತೆಗಳಿವೆ.

ಈ ಕುರಿತಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಚರ್ಚೆ ನಡೆಸಿರುವ ಮೇಯರ್ ಗಂಗಾಂಬಿಕೆ ಅವರು ಶೀಘ್ರದಲ್ಲೇ ರಸ್ತೆ ಉಸ್ತುವಾರಿಯನ್ನು ಎಇ, ಎಇಇಗಳಿಗೆ ವಹಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೈಕೋರ್ಟ್ ಸಮಿತಿಯಿಂದ ತಪಾಸಣೆ: ರಸ್ತೆ ಗುಂಡಿ ಮುಚ್ಚಲು ಆಗದ ಪಾಲಿಕೆ ಇದ್ದರೆಷ್ಟು, ಬಿಟ್ಟರೆಷ್ಟು ಎಂಬ ನ್ಯಾಯಾಲಯದ ಹೇಳಿಕೆ ಬೆನ್ನಲ್ಲೇ ನಗರದಲ್ಲಿ ಇರುವ ರಸ್ತೆ ಗುಂಡಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಹೈಕೋರ್ಟ್ ಸಮಿತಿ ಕೈಗೆತ್ತಿಕೊಂಡಿದೆ.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ನಗರದ 43 ಸ್ಥಳಗಳಲ್ಲಿ ರಸ್ತೆ ಗುಂಡಿಗಳಿವೆ ಎಂದು ಮಾಹಿತಿ ನೀಡಿದ್ದು, ಈ ಮಾಹಿತಿ ಆಧರಿಸಿ ಹೈಕೋರ್ಟ್ ಸಮಿತಿ ಇಂದು ತಪಾಸಣೆ ನಡೆಸುತ್ತಿದೆ.

ತಲೆದಂಡ ಸಾಧ್ಯತೆ: ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ರಸ್ತೆ ಗುಂಡಿ ಇಲ್ಲದಂತೆ ನೋಡಿಕೊಳ್ಳಿ ಎಂದು ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೈಕೋರ್ಟ್ ಸಮಿತಿ ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಿರುವ ವರದಿಯಲ್ಲಿ ಯಾವ ಪ್ರದೇಶದಲ್ಲಿ ರಸ್ತೆ ಗುಂಡಿಗಳಿವೆ ಎಂಬ ಮಾಹಿತಿ ಬಹಿರಂಗಗೊಂಡರೆ ಅಂತಹ ಅಧಿಕಾರಿಯನ್ನೇ ಹೊಣೆಗಾರರನ್ನಾಗಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಹೀಗಾಗಿ ನಾಳೆ ಯಾವ ಪ್ರದೇಶದಲ್ಲಿ ರಸ್ತೆ ಗುಂಡಿಗಳಿವೆ ಎಂಬ ಮಾಹಿತಿ ದೊರೆಯುವುದೋ ಆ ಭಾಗದ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆಗಳಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ