ನವದೆಹಲಿ: ದೇಶಾದ್ಯಂತ ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಸುರಕ್ಷಿತ ಹಾಗೂ ಗ್ರೀನ್ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟ ಮುಂದುವರಿಸುವಂತೆ ನ್ಯಾ. ಎ. ಕೆ ಸಿಕ್ರಿ ನೇತೃತ್ವದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ತೀರ್ಪಿನಲ್ಲಿ ಬೆಳಗ್ಗೆ 8 ರಿಂದ 10 ವರೆಗೂ ಪಟಾಕಿ ಹೊಡೆಯಬಹುದು. ಹೊಸ ವರ್ಷ ಮತ್ತು ಕ್ರಿಸ್ಮಸ್ ಸಂದರ್ಭದಲ್ಲಿ ರಾತ್ರಿ 12:30 ವರೆಗೂ ಪಟಾಕಿ ಹೊಡೆಯಲು ಅವಕಾಶ ಕಲ್ಪಿಸಲಾಗಿದೆ.
ಇನ್ಮುಂದೆ ಕೇವಲ ಲೈಸನ್ಸ್ ಹೊಂದಿರುವ ಮಾರಾಟಗಾರರಷ್ಟೇ ಪಟಾಕಿ ಮಾರಾಟ ಮಾಡಬೇಕು ಎಂದಿರುವ ಸುಪ್ರೀಂ, ಆನ್ ಲೈನಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣ ನಿಷೇಧಿಸಿದೆ. ಈ ತೀರ್ಪಿನ ಬಳಿಕವೂ ಪಟಾಕಿಗಳನ್ನು ಆನ್ಲೈನಲ್ಲಿ ಮಾರಾಟ ನಡೆಸಿದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಏನಿದು ಪ್ರಕರಣ?
ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆಯಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರ ಬೆನ್ನಲ್ಲೇ ಇಡೀ ದೇಶಾದ್ಯಂತ ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು.
ವಿಚಾರಣೆ ವೇಳೆ ದೇಶಾದ್ಯಂತ ಸಂಪೂರ್ಣ ಪಟಾಕಿ ನಿಷೇಧಕ್ಕೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿ, ಪಟಾಕಿ ಉತ್ಪಾದನೆ ಮತ್ತು ಮಾರಾಟದ ಮೇಲೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಅವಕಾಶ ನೀಡಬೇಕೆಂದು ಸಲಹೆ ನೀಡಿತ್ತು. ಈ ಉದ್ಯಮವನ್ನೇ ನಂಬಿಕೊಂಡಿರುವ ಅದೆಷ್ಟೋ ಕುಟುಂಬಗಳು ಬೀದಿಗೆ ಬರಲಿವೆ ಎಂದು ಪಟಾಕಿ ಉತ್ಪಾದಕರು ವಾದಿಸಿದ್ದರು.