ಭ್ರಷ್ಟಾಚಾರದ ವಿರುದ್ಧ ಜಾಗೃತಿಗಾಗಿ ಜಾಗೃತಿ ಸಪ್ತಾಹ

Varta Mitra News

ಬೆಂಗಳೂರು, ಅ.23- ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 29ರಿಂದ ನವೆಂಬರ್ 3ರವರೆಗೆ ಜಾಗೃತಿ ಸಪ್ತಾಹ ಆಚರಿಸಲು ಕೇಂದ್ರ ವಿಚಕ್ಷಣಾ ಆಯೋಗ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ.

ಕೇಂದ್ರ ವಿಚಕ್ಷಣಾ ಆಯೋಗದ ವ್ಯಾಪ್ತಿಗೆ ಬರುವ ಎಲ್ಲಾ ಸಚಿವಾಲಯ, ಇಲಾಖೆ, ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕ್‍ಗಳು, ಸಂಸ್ಥೆಗಳು ಜಾಗೃತಿ ಸಪ್ತಾಹ ಆಚರಿಸಲು ಸೂಚಿಸಲಾಗಿದೆ.

ನವ ಭಾರತ ನಿರ್ಮಾಣಕ್ಕೆ ಭ್ರಷ್ಟಾಚಾರ ನಿರ್ಮೂಲನೆ ಎಂಬುದು ಈ ವರ್ಷದ ಸಪ್ತಾಹದ ಘೋಷವಾಕ್ಯವಾಗಿದೆ. ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ, ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತೊಲಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಆಯೋಗ ತಿಳಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದು, ಪ್ರತಿಜ್ಞೆ ಕೈಗೊಳ್ಳುವ ಮೂಲಕ ಜಾಗೃತಿ ಸಪ್ತಾಹವನ್ನು ಅಕ್ಟೋಬರ್ 29ರಂದು ಆಚರಿಸಬೇಕು ಎಂದು ಸೂಚಿಸಿದ್ದಾರೆ.

ಸಪ್ತಾಹದ ಸಂದರ್ಭದಲ್ಲಿ ಪ್ರಮುಖ ಸ್ಥಳಗಳಲ್ಲಿ ಭಿತ್ತಿ ಪತ್ರಗಳ ಪ್ರದರ್ಶನ, ವಿಚಾರಗೋಷ್ಠಿ, ಭ್ರಷ್ಟಾಚಾರ ವಿರೋಧಿ ಕುರಿತ ಚರ್ಚಾಸ್ಪರ್ಧೆ, ಭಾಷಣ P ಸ್ಪರ್ಧೆಯನ್ನು ಶಾಲಾ ಕಾಲೇಜುಗಳಲ್ಲಿ ಆಯೋಜಿಸಿ ಬಹುಮಾನ ನೀಡಬೇಕು. ಗ್ರಾಮಸಭೆಗಳಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟದ ಜಾಗೃತಿ ಸೇರಿದಂತೆ ಭ್ರಷ್ಟಾಚಾರ ವಿರುದ್ಧದ ಲೇಖನಗಳ ವಿಶೇಷ ಸಂಚಿಕೆ ಹೊರತರಬೇಕು. ಸಪ್ತಾಹದಲ್ಲಿ ಸರ್ಕಾರೇತರ ಸಂಘಸಂಸ್ಥೆಗಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ವಿಚಕ್ಷಣಾ ಆಯೋಗ ಈ ಬಾರಿ ಇ-ಆಡಳಿತ ವ್ಯವಸ್ಥೆಯ ಸದ್ಬಳಕೆ ಮಾಡುವ ಮೂಲಕ ಸಾರ್ವಜನಿಕರ ಮುಖತಃ ಭೇಟಿಯನ್ನು ಕಡಿಮೆಗೊಳಿಸುವ ವಿವಿಧ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸಿ ಸಪ್ತಾಹವನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಸೂಚಿಸಿದೆ. ಇದರಿಂದ ರಾಜ್ಯ ಸರ್ಕಾರದ ವ್ಯಾಪ್ತಿಯ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ಸಾರ್ವಜನಿಕ ವಲಯದ ಬ್ಯಾಂಕ್, ನಿಗಮ ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು ಜಾಗೃತಿ ಸಪ್ತಾಹವನ್ನು ಆಚರಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಸಪ್ತಾಹ ಮುಗಿದ ಒಂದು ವಾರದೊಳಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅನುಪಾಲನಾ ವರದಿಯನ್ನು ಕಳುಹಿಸುವಂತೆ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೆ ವಿಜಯ ಭಾಸ್ಕರ್ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ