ಬಿಬಿಎಂಪಿ ವ್ಯಾಪ್ತಿಯ ಖಾಲಿ ಜಾಗಗಳನ್ನು ಸುಂದರೀಕರಣಗೊಳಿಸಲು ಆಯುಕ್ತರಿಗೆ ಪತ್ರ

ಬೆಂಗಳೂರು, ಅ.23- ಬಿಬಿಎಂಪಿ ವ್ಯಾಪ್ತಿಯ ರೈಲ್ವೆ ಇಲಾಖೆ ಅಕ್ಕಪಕ್ಕದ ಖಾಲಿ ಜಾಗಗಳನ್ನು ಸುಂದರೀಕರಣಗೊಳಿಸಲು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸರ್ಕಾರದ ವಿವಿಧ ಮುಖ್ಯಸ್ಥರುಗಳೊಂದಿಗೆ ಆಗಿಂದಾಗ್ಗೆ ಸಮನ್ವಯ ಸಮಿತಿ ಸಭೆ ಕರೆದು ಪರಿಹಾರ ಕಂಡುಕೊಳ್ಳಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯ ರೈಲ್ವೆ ಇಲಾಖೆ ಉಪಯೋಗದ ಜಾಗದ ಪಕ್ಕದ ಖಾಲಿ ಸ್ಥಳಗಳಲ್ಲಿ ಘನತ್ಯಾಜ್ಯ ಶೇಖರಣೆಗೊಂಡು ಹಲವಾರು ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ದೂರದೃಷ್ಟಿ ಮತ್ತು ನಗರದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ಖಾಲಿ ಜಾಗಗಳನ್ನು ಸುಂದರೀಕರಣಗೊಳಿಸುವುದು ಸೂಕ್ತ.
ನಗರದ ಅಭಿವೃದ್ಧಿ ಕುರಿತಂತೆ ನಡೆಸಲಾಗುವ ಸಮನ್ವಯ ಸಮಿತಿ ಸಭೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರೈಲ್ವೆ ಪ್ರದೇಶದಲ್ಲಿರುವ ಘನತ್ಯಾಜ್ಯವನ್ನು ತೆರವುಗೊಳಿಸಿ ಆ ಜಾಗವನ್ನು ಉದ್ಯಾನವನವನ್ನಾಗಿ ಪರಿವರ್ತಿಸುವ ಕುರಿತಂತೆ ಮಾತುಕತೆ ನಡೆಸುವಂತೆ ಶಿವರಾಜ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ