ಬೆಂಗಳೂರು, ಅ.22-ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿ ಚಿತ್ರರಂಗದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿರುವ ಶ್ರುತಿಹರಿಹರನ್ ಪರವಾಗಿ ಇನ್ನಷ್ಟು ನಟಿಯರು ಧ್ವನಿ ಎತ್ತಿದ್ದಾರೆ.
ನಟಿ ಅವಂತಿಕಾ ಶೆಟ್ಟಿ, ಮೇಘನಾ ಗಾವಂಕರ್ ಅವರು ಶ್ರುತಿಹರಿಹರನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ತಪ್ಪು ಮಾಡಿದವರು ಎಷ್ಟೇ ದೊಡ್ಡವರಿದ್ದರೂ ಅನ್ಯಾಯದ ವಿರುದ್ಧ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಘಟನೆ ನಡೆದಾಗ ಶ್ರುತಿಹರಿಹರನ್ ಮೌನವಾಗಿದ್ದುದು ಏಕೆ ಎಂಬ ಪ್ರಶ್ನೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ ಯಾವುದೇ ನಟಿ ಒಂದು ಚಿತ್ರವನ್ನು ಅರ್ಧ ಬಿಟ್ಟು ಬರಲು ಸಾಧ್ಯವಿಲ್ಲ. ಹಾಗಾಗಿ ಆ ಸಂದರ್ಭದ ನೋವುಗಳನ್ನು ಸಹಿಸಿಕೊಂಡಿರುತ್ತಾರೆ. ಚಿತ್ರೀಕರಣ ಮತ್ತು ಚಿತ್ರ ಬಿಡುಗಡೆ ನಂತರ ತಮಗಾದ ನೋವನ್ನು ಹೇಳಿಕೊಂಡರೆ ನಿರ್ಮಾಣಗೊಂಡ ಚಿತ್ರಕ್ಕೂ ನಷ್ಟವಾಗುತ್ತದೆ, ನಿರ್ಮಾಪಕರಿಗೂ ತೊಂದರೆಯಾಗುತ್ತದೆ, ನಟಿಯರ ಭವಿಷ್ಯವೂ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ ಆ ಸಂದರ್ಭದಲ್ಲಿ ಮಾತನಾಡಲು ಸಾಧ್ಯವಾಗುವುದಿಲ್ಲ. ಅದನ್ನೇ ಮುಂದಿಟ್ಟುಕೊಂಡು ನೋವನ್ನು ಸಹಿಸಿಕೊಳ್ಳುತ್ತಲೇ ಬದುಕಬೇಕು ಎನ್ನುವುದು ಸರಿಯಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಮೇಘನಾ ಗಾವಂಕರ್ ಅವರು ಟ್ವೀಟರ್‍ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಅವಂತಿಕಾ ಶೆಟ್ಟಿ ಅವರು ನೇರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಇದು ಹುಡುಗಿಯರ ಸಮಸ್ಯೆ, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ತಪ್ಪು ಮಾಡಿದ ವ್ಯಕ್ತಿಗಳ ವಿರುದ್ಧ ತನಿಖೆಯಾಗಬೇಕು ಎಂದಿದ್ದಾರೆ. ವಿಸ್ಮಯ ಚಿತ್ರದ ವೇಳೆ ಶ್ರುತಿ ಹರಿಹರನ್ ಅವರು ಅರ್ಜುನ್ ಸರ್ಜಾ ಜೊತೆ ನಟಿಸಿದ್ದು, ನನ್ನ ಪುಣ್ಯ ಎಂದು ಹೇಳಿರಬಹುದು. ಏಕೆಂದರೆ ಕೆಲವು ವೇಳೆ ನಾವು ನಿಜಜೀವನದಲ್ಲೂ ನಟನೆ ಮಾಡಬೇಕಾಗುತ್ತದೆ. ಹಾಗಾಗಿ ಚಿತ್ರದ ಹಿತದೃಷ್ಟಿಯಿಂದ ಆ ಸಂದರ್ಭದಲ್ಲಿ ಮಾತನಾಡಿದ್ದರೂ ಸತ್ಯಾಂಶಗಳು ಬೇರೆಯೇ ಇರುತ್ತವೆ.
ಮೀ ಟೂ ಚಳವಳಿಯಿಂದ ಶೋಷಣೆಗಳು ನಿಂತು ಹೋಗುತ್ತವೆ ಎಂಬ ಭ್ರಮೆ ಏನೂ ಇಲ್ಲ. ಆದರೆ ಕನಿಷ್ಠ ಜಾಗೃತಿಯಾದರೂ ಮೂಡುತ್ತದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯುವುದಕ್ಕೆ ಕಡಿವಾಣ ಬೀಳಬಹುದು ಎಂಬ ವಿಶ್ವಾಸವಿದೆ ಎಂದರು.