ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಯಾರನ್ನು ಕೂಡ ಪ್ರಧಾನಿ ಅಭ್ಯರ್ಥಿ ಎಂದು ಪಕ್ಷದಿಂದ ಬಿಂಬಿಸುವುದಿಲ್ಲ ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕರೂ ಆಗಿರುವ ಪಿ ಚಿದಂಬರಂ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದಕ್ಕೆ ಮಿಶ್ರ ಹಾಗೂ ಋಣಾತ್ಮಕ ಪ್ರತಿಕ್ರಿಯೆ ಹಲವು ಸಮಾನ ಮನಸ್ಕ ಮೈತ್ರಿ ಪಕ್ಷಗಳಿಂದ ನಮಗೆ ಬಂದಿವೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ನಾವೆಂದೂ ಹೇಳಿಕೊಂಡಿಲ್ಲ. ಕೆಲವು ಕಾಂಗ್ರೆಸ್ ನಾಯಕರು ಈ ಬಗ್ಗೆ ಮಾತನಾಡುವಾಗ ಎಐಸಿಸಿ ಮಧ್ಯೆ ಪ್ರವೇಶಿಸಿ ಅಂತಹ ಹೇಳಿಕೆ ನೀಡುವುದು ನಿಲ್ಲಿಸುವಂತೆ ಸೂಚಿಸಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು, ಅದನ್ನು ಅಧಿಕಾರದಿಂದ ಹೊರಗಿಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಎನ್ ಡಿಎ ಜಾಗದಲ್ಲಿ ಜನಪರವಾದ, ವ್ಯಕ್ತಿಗಳಿಗೆ ಸ್ವಾತಂತ್ರ್ಯ ನೀಡುವ, ಪ್ರಗತಿಪರ ಸರ್ಕಾರವನ್ನು ನೋಡುವುದು ನಮ್ಮ ಆಸೆ. ತೆರಿಗೆ ಭಯೋತ್ಪಾದನೆಯಂತಹ ವಾತಾವರಣವನ್ನು ಸೃಷ್ಟಿಸುವ ಸರ್ಕಾರ ನಮಗೆ ಬೇಡ. ಮಹಿಳೆಯರು, ಮಕ್ಕಳಿಗೆ ರಕ್ಷಣೆ ನೀಡುವ ರೈತರನ್ನು ಬೆಳೆಸುವ ಸರ್ಕಾರ ಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜೊತೆ ಸ್ಥಳೀಯ ಪಕ್ಷಗಳು ಮೈತ್ರಿ ಮಾಡಿಕೊಳ್ಳದಂತೆ ನರೇಂದ್ರ ಮೋದಿ ಸರ್ಕಾರ ಬೆದರಿಕೆ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ಆಪಾದಿಸಿದ್ದಾರೆ. ಸ್ಥಳೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಬಯಸುತ್ತಿದೆ. ಮೈತ್ರಿ ಮಾಡಿಕೊಂಡು ಚುನಾವಣೆ ನಂತರ ಪ್ರಧಾನ ಮಂತ್ರಿ ಯಾರಾಗಬೇಕು ಎಂದು ಎಲ್ಲಾ ಪಕ್ಷಗಳು ಒಟ್ಟಾಗಿ ಕುಳಿತು ಚರ್ಚೆ ಮಾಡಿ ನಿರ್ಧರಿಸಲಿದೆ ಎಂದರು.