ಬೆಂಗಳೂರು, ಅ.22-ಈವರೆಗೂ ಸಾಲು ಸಾಲು ರಜೆ ಹಾಗೂ ಹಬ್ಬಗಳಿಂದಾಗಿ ಆಮೆ ನಡಿಗೆಯಲ್ಲಿದ್ದ ಚುನಾವಣಾ ಪ್ರಚಾರ ಇಂದಿನಿಂದ ಬಿರುಸು ಪಡೆದುಕೊಂಡಿದ್ದು, ರಾಜಕೀಯ ಕಣ ರಂಗೇರಿದೆ.
ಮೂರೂ ಪಕ್ಷಗಳ ಘಟಾನುಘಟಿ ನಾಯಕರು ಅಖಾಡಕ್ಕಿಳಿದು ತೊಡೆ ತಟ್ಟುತ್ತಿದ್ದಾರೆ. ಐದು ಕ್ಷೇತ್ರಗಳ ಉಪಚುನಾವಣೆ ಪೈಕಿ ಬಳ್ಳಾರಿ, ಜಮಖಂಡಿ, ಶಿವಮೊಗ್ಗಗಳ ಚುನಾವಣೆಯ ಪ್ರಚಾರದ ಭರಾಟೆ ತೀವ್ರವಾಗಿದೆ.
ದಸರಾ, ವಿಜಯದಶಮಿ, ಆಯುಧಪೂಜೆಯಿಂದಾಗಿ ಸಾಲು ಸಾಲು ರಜೆಗಳಿದ್ದವು. ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕೆಲವು ನಾಯಕರು ಆಯುಧಪೂಜೆ ಸಲುವಾಗಿ ತಮ್ಮ ಊರಿಗೆ ಬಂದಿದ್ದರು. ಇಂದಿನಿಂದ ಮತ್ತೆ ಚುನಾವಣಾ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ವರಿಷ್ಠ ನಾಯಕರು ಕ್ಷೇತ್ರಗಳಲ್ಲಿ ಬಿಡಾರ ಹೂಡಿ ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ನಾಯಕರಲ್ಲಿ ಪ್ರಮುಖರಾದಂತಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನಿಂದ ಎರಡು ದಿನಗಳ ಕಾಲ ಬಳ್ಳಾರಿಯಲ್ಲಿ ಬೀಡು ಬಿಟ್ಟು ಪ್ರಚಾರ ಆರಂಭಿಸುತ್ತಿದ್ದಾರೆ. ನಿನ್ನೆ ಗದಗಿಗೆ ಭೇಟಿ ನೀಡಿ ತೋಂಟದಾರ್ಯ ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ ಅವರು, ಇಂದು ಬಳ್ಳಾರಿ ಜಿಲ್ಲೆ ಹಡಗಲಿ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ.
ಎರಡು ದಿನಗಳ ಕಾಲ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಅವರು ಪ್ರಚಾರ ನಡೆಸುತ್ತಿದ್ದು, ಅ.24 ರಂದು ಮಂಡ್ಯದಲ್ಲಿ , 25 ರಂದು ಶಿವಮೊಗ್ಗದಲ್ಲಿ, 26, 27ರಂದು ಜಮಖಂಡಿಯಲ್ಲಿ, 28 ಮತ್ತು 29 ರಲ್ಲಿ ಮತ್ತೆ ಬಳ್ಳಾರಿಯಲ್ಲಿ, 30 ರಂದು ಶಿವಮೊಗ್ಗದಲ್ಲಿ, 31 ರಂದು ಮತ್ತೆ ಜಮಖಂಡಿಯಲ್ಲಿ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಇಂದಿನಿಂದ ಎರಡು ದಿನಗಳ ಕಾಲ ಜಮಖಂಡಿಯಲ್ಲಿ ಠಿಕಾಣಿ ಹೂಡಿ ಪ್ರಚಾರ ನಡೆಸಲಿದ್ದಾರೆ. ಇಂದು ಬೆಳಗ್ಗೆ ವಿಮಾನದ ಮೂಲಕ ಬೆಳಗಾವಿ ತಲುಪಿದ ಪರಮೇಶ್ವರ್ ಅವರು ಅಲ್ಲಿಂದ ಜಮಖಂಡಿಗೆ ತೆರಳಿ ಕಾಂಗ್ರೆಸ್ ವೀಕ್ಷಕರ ಸಭೆಯಲ್ಲಿ ಭಾಗವಹಿಸಿದರು.
ಕ್ಷೇತ್ರಾದ್ಯಂತ ರೋಡ್ ಶೋಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಸಂಜೆ ಜಮಖಂಡಿಯಲ್ಲೇ ವಾಸ್ತವ್ಯ ಹೂಡಿ ನಾಳೆ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಬಳ್ಳಾರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.