ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಬಾಂಬ್ ಸ್ಫೋಟ ನಡೆದಿದ್ದು, 7 ಮಂದಿ ನಾಗರೀಕರು ಸಾವನ್ನಪ್ಪಿದ್ದಾರೆ.
ಕುಲ್ಗಾಂ ಜಿಲ್ಲೆಯ ಲಾರೂ ಪ್ರದೇಶದಲ್ಲಿ ಕೆಲ ಉಗ್ರರು ಅಡಗಿ ಕುಳಿತಿದ್ದಾರೆಂಬ ಖಚಿತ ಮಾಹಿತಿ ಹಿನ್ನಲೆಯಲ್ಲಿ ಸೇನಾಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು.
ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪ್ರತಿದಾಳಿ ನಡೆಸಿದ್ದ ಸೇನಾಪಡೆಗಳು ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆ ಅಂತ್ಯಗೊಂಡ ಬಳಿಕ ಸ್ಥಳಕ್ಕೆ ಯಾರೂ ಸುಳಿಯದಂತೆ ಸೇನೆ ಸೂಚಿಸಿತ್ತು. ಇದರ ಹೊರತಾಗಿಯೂ, ಕೆಲ ನಾಗರೀಕರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಪರಿಣಾಮ 7 ನಾಗರೀಕರು ಸಾವನ್ನಪ್ಪಿದ್ದಾರೆ.
ಘಟನೆ ಬಳಿಕ ಭದ್ರತಾ ಪಡೆ ಹಾಗೂ ಯುವಕರ ನಡುವೆ ಘರ್ಷಣೆ ಏರ್ಪಟ್ಟಿದ್ದು, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಈ ನಡುವೆ 7 ನಾಗರೀಕರ ಸಾವು ಹಾಗೂ ನಾಗರೀಕರು ಗಾಯಗೊಂಡಿರುವ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಕಾಶ್ಮೀರದಾದ್ಯಂತ ಇಂದು ಬಂದ್ ಆಚರಿಸಲಾಗುತ್ತಿದೆ.