ಬಿಬಿಎಂಪಿಯಿಂದ ಅರ್ಧಂಬರ್ಧ ಜಾಹೀರಾತುಗ¼ ತೆರವು ಕೆಲಸ

ಬೆಂಗಳೂರು, ಅ.22- ನಗರದ ಅಂದ ಕೆಡಿಸಿದ್ದ ಜಾಹೀರಾತುಗಳ ಪ್ರದರ್ಶನಕ್ಕೆ ಕಡಿವಾಣವೇನೋ ಬಿತ್ತು. ಆದರೆ, ಉಳಿದುಕೊಂಡಿರುವ ಜಾಹೀರಾತು ಪಳೆಯುಳಿಕೆಗಳು ಅಸಹ್ಯವಾಗಿ ಕಾಣುತ್ತಿದ್ದು, ಇದೇನಾ ಸ್ವಚ್ಛ ಬೆಂಗಳೂರು ಎಂಬ ಅನುಮಾನ ಕಾಡುವಂತಿದೆ.
ಹೌದು, ಬಿಬಿಎಂಪಿ ಸಿಬ್ಬಂದಿಗಳು ಯಾವುದೇ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಹೈಕೋರ್ಟ್ ಮಧ್ಯ ಪ್ರವೇಶಿಸಿ ಛೀಮಾರಿ ಹಾಕುವವರೆಗೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ ಕೊನೆಗೂ ನ್ಯಾಯಾಲಯದ ಆದೇಶಕ್ಕೆ ಮಣಿದು ನಗರದಲ್ಲಿರುವ ಎಲ್ಲ ರೀತಿಯ ಜಾಹೀರಾತು ಪ್ರದರ್ಶನಕ್ಕೆ ಮುಕ್ತಿ ಹಾಡಿದೆ.

ಹೀಗಾಗಿ ನಗರದಲ್ಲಿ ರಾರಾಜಿಸುತ್ತಿದ್ದ ಜಾಹೀರಾತುಗಳನ್ನು ತೆರವುಗೊಳಿಸಿದೆ. ಆದರೆ, ಸಿಬ್ಬಂದಿಗಳು ಜಾಹೀರಾತಿಗೆ ಬಳಸುವ ಬಟ್ಟೆಗಳನ್ನು ಸಂಪೂರ್ಣವಾಗಿ ತೆರವುಗೊಳಿಸದೆ ಅರ್ಧಂಬರ್ಧ ತೆಗೆದಿರುವುದುಅಸಹ್ಯವಾಗಿ ಕಂಡುಬರುತ್ತಿದೆ.

ಸಂಬಂಧಪಟ್ಟ ಮೇಲಧಿಕಾರಿಗಳು ಕೂಡಲೇ ಅರ್ಧಂಬರ್ಧ ಹಾರಾಡುತ್ತಿರುವ ಜಾಹೀರಾತು ಬಟ್ಟೆಗಳನ್ನು ಸಂಪೂರ್ಣ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಸುಂದರ ನಗರಿ ಬೆಂಗಳೂರಿಗೆ ಕಳಂಕ ಬರೋದು ಗ್ಯಾರಂಟಿ.
ವಿನ್ಯಾಸ ತೆರವುಗೊಳಿಸದಿರಲು ಕಾರಣವೇನು..? ನ್ಯಾಯಾಲಯ ಎಲ್ಲ ರೀತಿಯ ಜಾಹೀರಾತು ಪ್ರದರ್ಶನಗಳನ್ನು ನಿಷೇಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರೂ ಜಾಹೀರಾತು ಫಲಕಗಳನ್ನು ಅಳವಡಿಸುವ ವಿನ್ಯಾಸಗಳನ್ನು ಬಿಬಿಎಂಪಿ ತೆರವುಗೊಳಿಸಲು ಮುಂದಾಗದಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕೆಲವು ವಿನ್ಯಾಸಗಳನ್ನು ತೆರವುಗೊಳಿಸದಂತೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ, ಹಾಗೇ ಉಳಿದುಕೊಂಡಿರುವ ಜಾಹೀರಾತು ವಿನ್ಯಾಸಗಳನ್ನು ತೆರವುಗೊಳಿಸಬೇಕಾದ ಬಿಬಿಎಂಪಿ ಸಿಬ್ಬಂದಿಗಳು ಯಾವುದೇ ವಿನ್ಯಾಸಗಳನ್ನು ತೆರವುಗೊಳಿಸುತ್ತಿಲ್ಲ.
ಬಿಬಿಎಂಪಿ ಅಧಿಕಾರಿಗಳ ಈ ಧೋರಣೆ ಗಮನಿಸಿದರೆ ಮತ್ತೆ ನಗರದಲ್ಲಿ ಜಾಹೀರಾತು ಅಳವಡಿಕೆ ಜಾರಿಗೆ ಬರುವ ಸಾಧ್ಯತೆಗಳಿವೆ.
ಸುಮ್ಮನಿರದ ಮಾಫಿಯಾ: ನಗರದ ಜಾಹೀರಾತು ಅಳವಡಿಕೆ ಹಿಂದೆ ಭೂಗತ ಜಗತ್ತಿನ ಪಾತ್ರವಿದೆ. ವಿದೇಶದಲ್ಲಿರುವ ಡಾನ್ ಒಬ್ಬ ಬೆಂಗಳೂರಿನ ಜಾಹೀರಾತು ಮಾಫಿಯಾವನ್ನು ನಿಯಂತ್ರಿಸುತ್ತಿದ್ದಾನೆ.

ಒಂದು ಅಂದಾಜಿನ ಪ್ರಕಾರ ಈ ಜಾಹೀರಾತು ಮಾಫಿಯಾದಲ್ಲಿ ಪ್ರತಿನಿತ್ಯ ಕೋಟಿ ಕೋಟಿ ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ.
ಜಾಹೀರಾತು ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸದಿದ್ದರೆ ಯಾರ ಕೈಲೂ ಜಾಹೀರಾತು ಮಾಫಿಯಾವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿಂದೆ ಹಲವಾರು ಮಂದಿ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲು ಮುಂದಾಗಿ ಮತ್ತೆ ತೆಪ್ಪಗಾಗಿದ್ದರು.

ಈ ಎಲ್ಲ ಅಂಶಗಳನ್ನು ಗಮನಿಸಿದರೆ ಬೆಂಗಳೂರಿನ ಜಾಹೀರಾತು ಮಾಫಿಯಾವನ್ನು ಯಾರ ಕೈಯಲ್ಲೂ ಬಗ್ಗು ಬಡಿಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ನ್ಯಾಯಾಲಯ ಮಧ್ಯ ಪ್ರವೇಶಿಸಿರುವುದು ಮಾಫಿಯಾದ ಕೈ ಕಟ್ಟಿ ಹಾಕಿದೆ.
ಆದರೂ ಪಟ್ಟು ಬಿಡದ ಮಾಫಿಯಾ ಡಾನ್‍ಗಳು ಭವಿಷ್ಯದಲ್ಲಿ ಮತ್ತೆ ತಮ್ಮ ಜಾಹೀರಾತು ದಂಧೆ ಆರಂಭಿಸಲು ಕಸರತ್ತು ನಡೆಸುತ್ತಿವೆ. ಹೀಗಾಗಿಯೇ ಜಾಹೀರಾತು ವಿನ್ಯಾಸಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ