ವಾಯುಮಾಲಿನ್ಯ ತಡೆಗಟಲು ಕಟ್ಟುನಿಟ್ಟಿನ ಕ್ರಮ

ಬೆಂಗಳೂರು, ಅ.21- ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.

ದೇಶದಲ್ಲಿ ರಾಜಧಾನಿ ದೆಹಲಿ ನಂತರ ಅತಿ ಹೆಚ್ಚು ವಾಯುಮಾಲಿನ್ಯ ನಗರ ಎಂಬ ಆತಂಕ ಮೂಡಿಸಿರುವ ಬೆಂಗಳೂರಿನಲ್ಲಿ ಪರಿಸರ ಸಂರಕ್ಷಣೆಯ ಹಲವು ಕ್ರಮ ಕೈಗೊಳ್ಳಲು ಮುಂದಾಗಿರುವ ಮಂಡಳಿ ಈಗ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.

ಬೆಂಗಳೂರಿನಲ್ಲೇ ಸುಮಾರು 16 ಲಕ್ಷಕ್ಕೂ ಹೆಚ್ಚು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರದ ವಾಹನಗಳಿದ್ದು, ಅದರಿಂದ ವಿಷಕಾರಿ ಅನಿಲ ಹೊರಸೂಸುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಎಂಬ ವ್ಯತ್ಯಾಸವಿರುವುದಿಲ್ಲ. ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದೆ.

ಕೇಂದ್ರ ಸರ್ಕಾರದ ಜತೆ ಚರ್ಚಿಸಿ ಹಳೆ ವಾಹನಗಳನ್ನು ನಿಷೇಧ ಮಾಡುವ ಕುರಿತಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೆ, ಹೊಸ ವಾಹನಗಳು ರಸ್ತೆಗಿಳಿಯದಂತೆ ನಿಯಂತ್ರಿಸಲು, ಪಾರ್ಕಿಂಗ್ ಶುಲ್ಕ ಹಾಗೂ ತೆರಿಗೆ ಮತ್ತು ವಿಮಾ ದರ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ