ನವದೆಹಲಿ: ರಾಷ್ಟ್ರೀಯ ಪೊಲೀಸ್ ಹುತಾತ್ಮ ದಿನಾಚರಣೆ ಹಿನ್ನಲೆಯಲ್ಲಿ ಪೊಲೀಸ್ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕೆ ತ್ಯಾಗ ಬಲಿದಾನ ಮಾಡಿದ ಪೊಲೀಸರಿಗೆ ಗೌರವ ಸೂಚಿಸಿದರು. ದೇಶದ ಪೊಲೀಸ್ ಸಿಬ್ಬಂದಿ, ಪ್ಯಾರಾ ಮಿಲಿಟರಿ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯಗಳ ಕಾರ್ಯದ ಬಗ್ಗೆ ಭಾವನಾತ್ಮಕವಾಗಿ ಅಭಿನಂದನೆ ಸಲ್ಲಿಸಿದರು.
ನರೇಂದ್ರ ಮೋದಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ನೆಲೆಸಬೇಕಾದರೆ ಪೊಲೀಸ್ ಸೇವೆಯ ಪಾತ್ರ ಮಹತ್ವದಾಗಿದೆ. ಅಭದ್ರತೆ ಹಾಗೂ ಆತಂಕ ಸೃಷ್ಟಿಸುವಂತಹ ಪ್ರಯತ್ನಗಳಿಗೆ ಅಂಕುಶ ಹಾಕುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಕಾನೂನು ನಿರ್ವಹಣೆ ಹಾಗೂ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಬೇಕಾದ ದಿನವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೊಲೀಸರ ಸೇವೆ ಮಹತ್ತರವಾಗಿದ್ದು, ನಕ್ಸಲ್ ಬಾದಿತ ಜಿಲ್ಲೆಗಳಲ್ಲಿನ ಯುವಕರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪ್ರಧಾನಿ ಕರೆ ನೀಡಿದರು.
ಪೊಲೀಸ್ ಹಾಗೂ ಪ್ಯಾರಾ ಮಿಲಿಟರಿ ಪಡೆಗಳಲ್ಲದೆ, ಯಾವೊಬ್ಬ ವ್ಯಕ್ತಿ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ತೊಡಗುತ್ತಾರೋ ಅಂತಹವರಿಗೂ ಪೊಲೀಸ್ ಹುತಾತ್ಮ ದಿನವನ್ನು ಸಮರ್ಪಿಸುತ್ತೇನೆ. ಸ್ವಾತಂತ್ರ ಭಾರತದ ನಂತರ ಈ ಸ್ಮಾರಕವು ಅಸ್ತಿತ್ವಕ್ಕೆ ಬರಲು 70 ವರ್ಷ ಬೇಕಾಯಿತೇ ಎಂದು ವಿರೋಧ ಪಕ್ಷದವರನ್ನು ಪರೋಕ್ಷವಾಗಿ ಟೀಕಿಸಿದರು.
ಕಾನೂನಾತ್ಮಕ ಕಾರಣಗಳಿಂದ ಈ ಸ್ಮಾರಕ ನಿರ್ಮಾಣದ ಕೆಲಸ ವಿಳಂಬವಾಯಿತು. ಒಂದು ವೇಳೆ ಹಿಂದಿನ ಸರ್ಕಾರ ಸ್ಮಾರಕವನ್ನು ನಿರ್ಮಾಣ ಮಾಡಲು ಬಯಸಿದ್ದರೆ, ಸ್ಮಾರಕದ ಅಡಿಪಾಯವು ಧೂಳಿನಲ್ಲಿ ಮುಚ್ಚಿಹೋಗುವ ಮೊದಲೇ ಅದನ್ನು ನಿರ್ಮಾಣ ಮಾಡಬಹುದಿತ್ತು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.