ಬೆಂಗಳೂರು, ಅ.20- ನಗರದ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸರಿಸಮನಾಗಿ ಬಿಬಿಎಂಪಿ ಶಾಲಾ-ಕಾಲೇಜುಗಳನ್ನು ಅಭಿವೃದ್ಧಿಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ತಿಳಿಸಿದರು.
ಮೈಕ್ರೋಸಾಫ್ಟ್ ರೋಷಿನಿ ಯೋಜನೆಯಡಿ ನಗರದ ಟೌನ್ಹಾಲ್ನಲ್ಲಿ ಪಾಲಿಕೆ ಪ್ರಾಧ್ಯಾಪಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಬಿಎಂಪಿ ಶಾಲಾ-ಕಾಲೇಜುಗಳ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಮೈಕ್ರೋಸಾಫ್ಟ್ ಸಂಸ್ಥೆ ಮುಂದೆ ಬಂದಿದೆ. ಈ ಯೋಜನೆಯನ್ವಯ ಎಲ್ಲ ಪಾಲಿಕೆಯ ಶಾಲಾ-ಕಾಲೇಜು ಮಕ್ಕಳಿಗೆ ಉತ್ತಮ ಪಾಠ-ಪ್ರವಚನ ಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಧ್ಯಾಪಕರಿಗೂ ತರಬೇತಿ ಕೊಡಲಾಗುತ್ತಿದೆ ಎಂದರು.
ಇದರಿಂದಾಗಿ ನಮ್ಮ ಮಕ್ಕಳ ಐ-ಕ್ಯು ಲೆವೆಲ್ ಸುಧಾರಿಸಲಿದೆ. ಪ್ರತಿಷ್ಠಿತ ಶಾಲಾ-ಕಾಲೇಜುಗಳ ಮಕ್ಕಳಂತೆಯೇ ನಮ್ಮ ವಿದ್ಯಾರ್ಥಿಗಳೂ ಶಿಕ್ಷಣದಲ್ಲಿ ಮುಂದೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಈಗಿನ ಮಕ್ಕಳಿಗೆ ಕಂಪ್ಯೂಟರ್ ಜತೆಗೆ ಇಂಗ್ಲಿಷ್ ಭಾಷೆಯ ಅಗತ್ಯವಿದೆ. ಹೀಗಾಗಿ ನಾವು ತಂತ್ರಜ್ಞಾನದ ಮೂಲಕ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡಲು ಮುಂದಾಗಿದ್ದೇವೆ ಎಂದು ಹೇಳಿದರು.
ಇದರ ಜತೆಗೆ ಸರ್ಕಾರಿ ಮತ್ತು ಬಿಬಿಎಂಪಿ ಶಾಲೆಗಳನ್ನು ಮಾಡೆಲ್ ಶಾಲೆಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಿದ್ದೇವೆ. ಹೀಗಾಗಿ ನ.14ರಿಂದ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಪ್ರತ್ಯೇಕ ಚಾನೆಲ್ ಸ್ಥಾಪಿಸುತ್ತಿದ್ದೇವೆ ಎಂದು ತಿಳಿಸಿದರು.
ಇಂದಿನ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲೇ ಇಂಗ್ಲಿಷ್ ಕಲಿಸುವಂತೆ ಸಿಎಂ ಸೂಚಿಸಿದ್ದಾರೆ. ಹಾಗಾಗಿ ನಾವು ಕೂಡ ತಂತ್ರಜ್ಞಾನದ ಮೂಲಕ ನಮ್ಮ ಶಾಲಾ-ಕಾಲೇಜು ಮಕ್ಕಳಿಗೆ ಇಂಗ್ಲಿಷ್ ಕಲಿಸಲು ಆದ್ಯತೆ ನೀಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 157 ಶಾಲಾ-ಕಾಲೇಜುಗಳಿವೆ. 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 800ಕ್ಕೂ ಹೆಚ್ಚು ಪ್ರಾಧ್ಯಾಪಕರು ಬೋಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಾಧ್ಯಾಪಕರಿಗೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದ್ದು, ಆನಂತರ ನಮ್ಮ ಶಾಲೆಗಳು ಕೂಡ ಹೈಟೆಕ್ ಆಗಲಿವೆ. ಬಿಬಿಎಂಪಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದವರು ಕೂಡ ನಮ್ಮ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಾರೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಪಾಲಿಕೆ ವಿಶೇಷ ಆಯುಕ್ತ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.