
ಬೆಂಗಳೂರು, ಅ.20- ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಚಾರದ ಗೀಳಿಗಾಗಿ ಹಿರಿಯರು ಹಾಗೂ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ವಿರುದ್ಧ ಉಪಚುನಾವಣೆ ಸಂದರ್ಭದಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಪ್ರದೇಶ ಪ್ರಚಾರ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಐದು ವರ್ಷಗಳ ಕಾಲ ರಾಜ್ಯದಲ್ಲಿ ಹಸಿವುಮುಕ್ತ, ಭ್ರಷ್ಟಮುಕ್ತ ಆಡಳಿತ ನೀಡಿರುವ ಸಿದ್ದರಾಮಯ್ಯನವರನ್ನು ಹಾವಿಗೆ ಹೋಲಿಸಿ ಅವರಿಗೆ ಹಲ್ಲೇ ಇಲ್ಲ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ದೊಡ್ಡವರನ್ನು ಟೀಕಿಸಿ ಪ್ರಚಾರ ಪಡೆಯುವ ಶೋಭಾ ಅವರೇ ಬಿಜೆಪಿ ಪಕ್ಷದ ನಿಜವಾದ ವಿಷದ ಹಾವು ಎಂದು ಸಮಿತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಮಾಡಿರುವುದನ್ನು ಸಹಿಸಲಾಗದೆ ಸರ್ಕಾರದ ವಿರುದ್ಧ ಆಧಾರ ರಹಿತ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಅಸಂಸದೀಯ ಪದ ಬಳಕೆ ಮಾಡುವ ಶೋಭಾ ಅವರು ಮೊದಲು ತಮ್ಮ ಪಕ್ಷದಲ್ಲಿರುವ ಹಾವು-ಚೇಳುಗಳ ಬಗ್ಗೆ ಮಾತನಾಡಲಿ ಎಂದು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮನೋಹರ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ದನ್, ದರ್ಶನ್‍ಮೂರ್ತಿ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.