ಅಮೃತಸರ: ಪಂಜಾಬ್ ನ ಅಮೃತಸರ ಬಳಿ ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ ರೈಲು ಹರಿದು ಸಂಭವಿಸಿದ ದುರಂತದಲ್ಲಿ ಸಾವಿಗೀಡಾಗಿರುವವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ದಸರಾ ಪ್ರಯುಕ್ತ ರಾವಣ ದಹನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಾವಣನಿಗೆ ಬೆಂಕಿ ಹಚ್ಚಿ ಪಟಾಕಿ ಸಿಡಿಯಲು ಆರಂಭಿಸಿದಾಗ ದೂರದಲ್ಲಿ ನಿಂತಿದ್ದ ಜನ ರೈಲ್ವೆ ಹಳಿ ಬಳಿ ಬಂದು ಸೇರಿದ್ದರು. ಈ ವೇಳೆ ವೇಗವಾಗಿ ಆಗಮಿಸಿದ ರೈಲು ಹಳಿಗಳ ಮೇಲೆ ನಿಂತಿದ್ದ ಜನರ ಮೇಲೆ ಹರಿದಿದೆ. ಪಟಾಕಿ ಸದ್ದಿನಿಂದ ರೈಲು ಬಂದಿದ್ದು, ಜನರಿಗೆ ತಿಳಿದೇ ಇಲ್ಲ. ಹಳಿ ಮೇಲೆ ನಿಂತಿದ್ದ ಜನರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ 72ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇದೀಗ ಸಾವಿನ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ಅಮೃತಸರದಲ್ಲಿ ನಡೆದ ರೈಲು ಅಪಘಾತದ ಸುದ್ದಿ ತಿಳಿದ ಕೂಡಲೇ ಇದೀಗ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಅಮೆರಿಕಾದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಭಾರತಕ್ಕೆ ಆಗಮಿಸುತ್ತಿದ್ದಾರೆ.
ರೈಲು ದುರಂತದ ಹಿನ್ನಲೆಯಲ್ಲಿ ಪಂಜಾಬ್ ಸರ್ಕಾರ ಶನಿವಾರ ಒಂದು ದಿನದ ಶೋಕಾಚರಣೆ ಘೋಷಿಸಿದ್ದು, ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳಲ್ಲಿ ಬಂದ್ ಆಚರಿಸಲು ಸೂಚಿಸಿದೆ. ಈ ನಡುವೆ ಇಸ್ರೇಲ್ ತೆರಳಬೇಕಿದ್ದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ತಮ್ಮ ಪ್ರವಾಸವನ್ನು ಮುಂದೂಡಿದ್ದಾರೆ.