ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೆಲ ಪತ್ರಕರ್ತರೆಯರು ಹಾಗೂ ಮುಸ್ಲೀಂ ಮಹಿಳೆಯೊಬ್ಬರು ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿ ವಾಪಸ್ಸಾಗಿದ್ದಾರೆ. ಈ ನಡುವೆ ಇಂದು ಹೈದರಾಬಾದ್ ಮೂಲದ ಕ್ರೈಸ್ತ ಮಹಿಳೆಯೊಬ್ಬರು ಅಯ್ಯಪ್ಪ ದೇವಾಲಯಕ್ಕೆ ತೆರಳಲು ಯತ್ನಿಸಿಸಿದ ಘಟನೆ ನಡೆದಿದೆ.
ಮೇರಿ ಸ್ವೀಟಿ ಎಂಬ ಕ್ರೈಸ್ತ ಎನ್ಆರ್ಐ ಶಬರಿಮಲೆ ದೇಗುಲಕ್ಕೆ ತೆರಳಲು ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸರ ಭದ್ರತೆಯಿಲ್ಲದೆ ತೆರಳಲು ಆಕೆ ಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮಹಿಳೆಯರು ದೇಗುಲಕ್ಕೆ ಪ್ರವೇಶಿಸಲು ಯತ್ನಿಸಿದರೆ ಅಯ್ಯಪ್ಪ ದೇವಸ್ಥಾನದ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಶಬರಿಮಲೆಯ ಪ್ರಮುಖ ತಂತ್ರಿ ಎಚ್ಚರಿಸಿದ್ದಾರೆ.
ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದ್ದರೂ, ಯಾವುದೇ ಮಹಿಳೆಯರಿಗೆ ಈ ವರೆಗೆ ಪ್ರವೇಶ ನೀಡಲಾಗಿಲ್ಲ. ಅಲ್ಲದೇ ಸುಪ್ರೀಂ ತೀರ್ಪಿನ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿವೆ. ಈ ನಡುವೆ ಕಳೆದ ಎರಡು ಮೂರು ದಿನಗಳಿಂದ ಅನೇಕ ಪ್ರಮುಖ ಬೆಳವಣಿಗಳು ನಡೆಯುತ್ತಿವೆ.
ಭಾರಿ ಪ್ರತಿಭಟನೆಗಳ ನಡುವೆಯೇ ಶಬರಿಮಲೆ ಬೆಟ್ಟ ಹತ್ತಿದ್ದ ಒಬ್ಬರು ಮಹಿಳಾ ಪತ್ರಕರ್ತೆ ಹಾಗೂ ರೆಹಾನಾ ಫಾತಿಮಾ ಎಂಬ ಮುಸ್ಲಿಂ ಮಹಿಳೆ ದೇಗುಲಕ್ಕೆ ತೆರಳದೆ ವಾಪಸಾಗಿದ್ದಾರೆ. ಪೊಲೀಸರ ಭಾರಿ ಭದ್ರತೆ ನಡುವೆ ಶಬರಿಮಲೆ ಬೆಟ್ಟ ಹತ್ತಿದ್ದ ಇಬ್ಬರು ಮಹಿಳೆಯರು ಸನ್ನಿಧಾನಕ್ಕೆ ತೆರಳದೆ ವಾಪಸಾಗಲು ಒಪ್ಪಿಕೊಂಡಿದ್ದಾರೆ. ಆ ಮಹಿಳೆಯರೊಂದಿಗೆ ಐಜಿಪಿ ಶ್ರೀಜಿತ್ ಮಾತುಕತೆ ನಡೆಸಿದ್ದು, ಬಳಿಕ ಬೆಟ್ಟದಿಂದ ಕೆಳಗಿಳಿಯಲು ಒಪ್ಪಿಕೊಂಡರು.
ಇನ್ನೊಂದೆಡೆ, ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳಾ ಭಕ್ತೆಯ ಮನೆಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ನಿನ್ನೆ ಸಹ ದಿಲ್ಲಿಯಲ್ಲಿರುವ ವಿದೇಶಿ ಮಾಧ್ಯಮದ ಮಹಿಳಾ ಪ್ರತಿನಿಧಿಯೊಬ್ಬರು ಬೆಟ್ಟ ಹತ್ತಲು ವಿಫಲ ಪ್ರಯತ್ನ ನಡೆಸಿದ್ದರು. ಪೊಲೀಸರ ಭದ್ರತೆ ಹಾಗೂ ಅನೇಕ ನಿರ್ಬಂಧಗಳ ನಡುವೆಯೂ ಪ್ರತಿಭಟನಾಕಾರರು ಆಕೆಯನ್ನು ವಾಪಸ್ ಕಳಿಸಿದರು. ಬುಧವಾರ ಸಹ ಆಂಧ್ರ ಪ್ರದೇಶದ ಮಹಿಳಾ ಭಕ್ತೆಯೊಬ್ಬರು ಬೆಟ್ಟ ಹತ್ತಲು ವಿಫಲ ಯತ್ನ ನಡೆಸಿದ್ದರು.