ನವದೆಹಲಿ ,ಅ.18-ತಂದೆ ಮತ್ತು ಮಗನ ಸಂಘರ್ಷದಿಂದಾಗಿ ಇದೀಗ ರೇಮಂಡ್ ಗ್ರೂಪ್ನ ಗೌರವ-ಅಧ್ಯಕ್ಷ ಸ್ಥಾನದಿಂದ ವಿಜಯಪತ್ ಸಿಂಘಾನಿಯಾ(80) ಅವರನ್ನು ಆಡಳಿತ ಮಂಡಳಿ ವಜಾಗೊಳಿಸಿದೆ.
ಈ ಮಂಡಳಿಗೆ ವಿಜಯಪತ್ ಅವರ ಪುತ್ರ ಗೌತಮ್ ಸಿಂಘಾನಿಯಾ ಅವರೇ ಅಧ್ಯಕ್ಷರು. ರೇಮಂಡ್ ಗ್ರೂಪ್ನ ಮುಖ್ಯಸ್ಥರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಗೌತಮ್ ಮತ್ತು ಅವರ ತಂದೆ ಜತೆಗಿನ ಸಂಘರ್ಷ, ಈಗ ಈ ರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳು ಇಂದು ಶೇ.3ರಷ್ಟು ಕುಸಿದಿವೆ.
ಟೆಕ್ಸ್ಟೈಲ್ಸ್ ಜಗತ್ತಿನ ದೈತ್ಯ ಕಂಪನಿಯನ್ನಾಗಿ ರೇಮಂಡ್ ಅನ್ನು ಕಟ್ಟಿ ಬೆಳೆಸುವಲ್ಲಿ ವಿಜಯ್ಪತ್ ಸಿಂಘಾನಿಯಾ ಅವರ ಪಾತ್ರ ಹಿರಿದು. ಕಂಪನಿಯ ಸಂಸ್ಥಾಪಕರಾದ ಅವರು, ತಮ್ಮ ಆಸ್ತಿ ಮತ್ತು ವ್ಯವಹಾರಗಳನ್ನು ಮಗನಿಗೆ ವಹಿಸಿದ್ದರು. ತಂದೆ-ಮಗನ ನಡುವೆ ಕೆಲವು ವರ್ಷಗಳಿಂದ ಕಾನೂನು ಸಮರ ನಡೆಯುತ್ತಿದೆ. ಈಗ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.