ಭುವನೇಶ್ವರ, ಅ.18-ಒಡಿಶಾ ಮೇಲೆ ಬಂದೆರಗಿದ ವಿನಾಶಕಾರಿ ತಿತಿಲಿ ಚಂಡಮಾರುತದ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 57ಕ್ಕೇರಿದೆ. ಈ ಪ್ರಕೃತಿ ವಿಕೋಪದಲ್ಲಿ ಕರಾವಳಿ ರಾಜ್ಯದಲ್ಲಿ ಒಟ್ಟು 2,200 ಕೋಟಿ ರೂ.ಗಳ ಅಪಾರ ಹಾನಿ ಮತ್ತು ನಷ್ಟ ಸಂಭವಿಸಿದೆ.
ಸಮುದ್ರ ಸುಂಟರಗಾಳಿಯೊಂದಿಗೆ ಭಾರೀ ಮಳೆ ಮತ್ತು ಭೂಕುಸಿತಗಳಿಂದ ತತ್ತರಿಸಿರುವ ಒಡಿಶಾದ ಸಂತ್ರಸ್ತ ಪ್ರದೇಶಗಳಲ್ಲಿ ಪರಿಹಾರ ಮತ್ತು ಮರು ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮೃತ ಕುಟುಂಬಗಳ ಹತ್ತಿರದ ಸಂಬಂಧಿಗಳಿಗೆ ತಲಾ 10 ಲಕ್ಷ ರೂ.ಗಳ್ ಪರಿಹಾರ ನೀಡಿದ್ದಾರೆ.
ತಿತಿಲಿ ಚಂಡಮಾರುತದಿಂದ ಒಡಿಶಾದ ಒಟ್ಟು 16 ಜಿಲ್ಲೆಗಳು ಬಾಧಿತವಾಗಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಚಂಡಮಾರುತದ ತೀವ್ರತೆಯಿಂದ ಹಾಳಾಗಿದ್ದ ರಸ್ತೆಗಳನ್ನು ಸರಿಪಡಿಸಲಾಗಿದೆ.