ನಾಗ್‍ಪುರ್, ಅ.18- ಸೂಕ್ತ ಮತ್ತು ಅಗತ್ಯ ಕಾನೂನು ಜಾರಿಗೊಳಿಸುವ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಾದಿಯನ್ನು ಸುಗಮಗೊಳಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‍ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಮಹಾರಾಷ್ಟ್ರದ ನಾಗ್‍ಪುರ್ ಜಿಲ್ಲೆಯ ರೇಷಿಮ್‍ಭಾಗ್‍ನ ಆರ್‍ಎಸ್‍ಎಸ್ ಕೇಂದ್ರ ಕಚೇರಿಯಲ್ಲಿ ವಿಜಯದಶಮಿ ದಿನದ ತಮ್ಮ ಸಂದರ್ಶನದಲ್ಲಿ ರಾಮಮಂದಿರ ನಿರ್ಮಾಣ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಆರ್‍ಎಸ್‍ಎಸ್ ಪರಮೋಚ್ಛ ನಾಯಕರು ಆತ್ಮಗೌರವ, ಸ್ವಾಭಿಮಾನದ ದೃಷ್ಟಿಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅತ್ಯಗತ್ಯ. ಇದರಿಂದ ಸದ್ಭಾವನೆ ಮತ್ತು ಏಕತೆ ವಾತಾವರಣ ಸೃಷ್ಟಿಯಾಗಲು ನೆರವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳವನ್ನು ಮಂದಿರ ನಿರ್ಮಾಣಕ್ಕಾಗಿ ಇನ್ನೂ ಮಂಜೂರು ಮಾಡಿಲ್ಲ. ಆದಾಗ್ಯೂ ಅದೇ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕಾಗಿ ಅಗತ್ಯವಾದ ಎಲ್ಲ ಪೂರಕ ಕ್ರಮಗಳನ್ನೂ ಆರ್‍ಎಸ್‍ಎಸ್ ಕೈಗೊಳ್ಳುತ್ತದೆ ಎಂದು ಭಾಗವತ್ ಪುನರುಚ್ಚರಿಸಿದರು.
ರಾಮಮಂದಿರ ನಿರ್ಮಾಣ ವಿಷಯದಲ್ಲಿ ತಲೆದೋರಿರುವ ವಿವಾದ ಇತ್ಯರ್ಥವಾಗುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ ಅವರು, ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಯುಂಟುಮಾಡಲು ಕೆಲವು ದುಷ್ಟಶಕ್ತಿಗಳು ಕುತಂತ್ರ ರೂಪಿಸುತ್ತಿವೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥರು ಕಿಡಿಕಾರಿದರು.
ನಗರ ಮಾವೋವಾದಿ ವಿರುದ್ಧ ಎಚ್ಚರಿಕೆ: ನಗರ ಮಾವೋವಾದಿ (ಅರ್ಬನ್ ಮಾವೋಯಿಸಮ್) ಮತ್ತು ನವ ಎಡರಂಗ (ನಿಯೋಲೆಫ್ಟ್) ಇವುಗಳಿಂದ ಸಮಾಜಕ್ಕೆ ದೊಡ್ಡಮಟ್ಟದ ಆತಂಕವಿದೆ. ಇದರ ವಿರುದ್ಧ ಎಚ್ಚರದಿಂದ ಇರುವಂತೆ ಅವರು ಕರೆ ನೀಡಿದರು.
ಸುಳ್ಳು ಅಪಪ್ರಚಾರ ಮತ್ತು ಹಗೆತನವನ್ನು ಸೃಷ್ಟಿಸುವ ಮೂಲಕ ಈ ಎರಡೂ ಶಕ್ತಿಗಳು ಸಮಾಜದ ಶಾಂತಿ ಮತ್ತು ಸೌಹಾರ್ದ ವಾತಾವರಣವನ್ನು ಕದಡುತ್ತಿವೆ. ಇವುಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.