ಬೆಂಗಳೂರು, ಅ.18-ಮೃತಪಟ್ಟ ಮಹಿಳೆ ಹೆಸರಿನಲ್ಲಿ ಕಂಪೆನಿಯನ್ನು ನೋಂದಣಿ ಮಾಡಿ ಕೋಟ್ಯಂತರ ರೂ. ವಹಿವಾಟು ನಡೆಸಿದ ವ್ಯಾಪಾರಿಯೊಬ್ಬನನ್ನು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಮೊಂಗಿಲಾಲ್ ಎಂಬ ವ್ಯಕ್ತಿ ಬಂಧನಕ್ಕೊಳಗಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೊಂಗಿಲಾಲ್, ವಿಮಲಾ ದೇವಿ ಎಂಬ ಮಹಿಳೆಯ ಹೆಸರಿನಲ್ಲಿ ದೇವಿ ಟ್ರೇಡರ್ಸ್ ಎಂಬ ಕಂಪೆನಿಯನ್ನು ಸ್ಥಾಪಿಸಿ, ಜಿಎಸ್ಟಿ ಸಂಖ್ಯೆ ಪಡೆದು ಸುಮಾರು 245 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಆದರೆ ಇತ್ತೀಚೆಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಅಕ್ರಮ ಬಯಲು ಮಾಡಿದ್ದಾರೆ.
ವಿಮಲಾ ದೇವಿಯವರ ಪುತ್ರ ನಿರುದ್ಯೋಗಿಯಾಗಿದ್ದು, ಆತನನ್ನು ನಂಬಿಸಿ ಮೊಂಗಿಲಾಲ್ ಮೃತಪಟ್ಟ ಮಹಿಳೆಯ ವಿವರ ಮತ್ತು ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ಎರಡು ಚಾಲ್ತಿ ಖಾತೆಗಳನ್ನು ತೆರೆದು ವ್ಯಾಪಾರ ನಡೆಸಿದ್ದಾನೆ. ತನಿಖೆ ನಡೆಸಿದಾಗ ಎಲ್ಲಾ ಅಕ್ರಮಗಳು ಬಯಲಾಗಿದ್ದು, ಮೊಂಗಿಲಾಲ್ ಸರಕನ್ನು ಪೂರೈಕೆ ಮಾಡದೆ ನಕಲಿ ಬಿಲ್ಗಳನ್ನು ಸೃಷ್ಟಿಸುತ್ತಿದ್ದ ಎಂಬ ಮಾಹಿತಿಯೂ ಬಹಿರಂಗವಾಗಿದೆ.
ಎರಡು ವರ್ಷಗಳ ಹಿಂದೆ ಮೃತಪಟ್ಟ ಮಹಿಳೆ ಹೆಸರಿನಲ್ಲಿ ನಕಲಿ ಕಂಪೆನಿ ತೆಗೆದು ವ್ಯಾಪಾರ ಮಾಡಿ ತೆರಿಗೆ ವಂಚಿಸಿದ ಮೊಂಗಿಲಾಲ್ ವಿರುದ್ಧ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗದ ಕೇಸು ದಾಖಲಿಸಿದ್ದು, ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಹಗರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಲು ತನಿಖೆಯನ್ನು ಮುಂದುವರೆಸಲಾಗಿದೆ.