ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿವಾದ ತಾರಕ್ಕೇರಿದ್ದು, ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಭಕ್ತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಪಂಪೆ ಹಾಗೂ ನೀಳಕ್ಕಲ್ ನಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ನಡುವೆ ಕೇರಳದ ಬಹುತೇಕ ಭಾಗಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ನೀಳಕ್ಕಲ್ ಸೇರಿದಂತೆ ಹಲವೆಡೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನೀಳಕ್ಕಲ್ನಲ್ಲಿ ನಡೆಯುತ್ತಿರುವ ಮುಷ್ಕರಕ್ಕೆ ಜನಬೆಂಬಲ ಹೆಚ್ಚುತ್ತಿದ್ದಂತೆ, ಪೊಲೀಸರು ಮುಷ್ಕರನಿರತರನ್ನು ಚದುರಿಸಿ, ಅವರು ಹಾಕಿಕೊಂಡಿದ್ದ ಚಪ್ಪರ ಕಿತ್ತೆಸೆದಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಅಯ್ಯಪ್ಪ ಆಚಾರಾನುಷ್ಠಾನ ಸಮಿತಿ ಕಾರ್ಯಕರ್ತರು ಮತ್ತೆ ಚಪ್ಪರ ನಿರ್ವಿುಸಿ ಮುಷ್ಕರ ಮುಂದುವರಿಸಿದ್ದಾರೆ. ರಸ್ತೆಯಲ್ಲಿ ಕುಳಿತು ಅಯ್ಯಪ್ಪ ಘೊಷಣೆ ಮೊಳಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ರಸ್ತೆಯಿಂದ ಬದಿಗೆ ಸರಿಸಿದ್ದಾರೆ. ಇನ್ನು ಹಿಂದು ಐಕ್ಯವೇದಿ ವತಿಯಿಂದ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.