ಮರಣ ಮೃದಂಗ ಬಾರಿಸಿದ ಎಚ್1ಎನ್1

ಬೆಂಗಳೂರು: ಮಾರಣಾಂತಿಕ ಎಚ್1ಎನ್1 ಕಾಯಿಲೆ ನಗರದಲ್ಲಿ ಮರಣ ಮೃದಂಗ ಬಾರಿಸಿದೆ. ಇದೇ 11 ರಂದು ಚನ್ನಪಟ್ಟಣದ ಬುಕ್ಕಸಾಗರ ನಿವಾಸಿ ಮಹದೇವಪ್ಪ ಎಂಬುವರು ಬೃಂದಾವನ ಏರಿಆನ್ ಆಸ್ಪತ್ರೆಗೆ ಜ್ವರದಿಂದ ದಾಖಲಾಗಿದ್ದರು. ಈಗ ಅವರು ಮೃತಪಟ್ಟಿದ್ದು, ಎಚ್1ಎನ್1 ಶಂಕೆ ವ್ಯಕ್ತವಾಗಿದೆ.

ಆದರೆ ಮಹದೇವಪ್ಪ ಕುಟುಂಬದವರು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೋಗಿಗಳ ಸಂಖ್ಯೆ ಹೆಚ್ಚಳ:
ಕಳೆದ 20 ದಿನದಿಂದೀಚೆಗೆ 52 ಮಂದಿಗೆ ಎಚ್1ಎನ್1 ಇರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 30 ಮಂದಿ ಮಹಿಳೆಯರೇ ಇರುವುದು ಆತಂಕಕಾರಿ ವಿಷಯವಾಗಿದೆ. ರೋಗ ನಿಯಂತ್ರಣಕ್ಕೆ ತರುವಲ್ಲಿ ಪಾಲಿಕೆ ವಿಫಲವಾಗಿದೆ.

ಎಚ್ಚೆತ್ತುಕೊಂಡ ಬಿಬಿಎಂಪಿ:
ದಿನದಿಂದ ದಿನಕ್ಕೆ ಎಚ್1ಎನ್1 ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ ರಂದೀಪ್ ಹಾಗೂ ಪಾಲಿಕೆ ಆರೋಗ್ಯಾಧಿಕಾರಿಗಳೊಂದಿಗೆ ಇಂದು ಸಭೆ ಹಮ್ಮಿಕೊಂಡಿದ್ದು, ರ್ಯಾಪಿಡ್ ರೆಸ್ಪಾನ್ಸ್ ಟೀಮ್ ನೇಮಕ ಮಾಡಲಾಗಿದೆ.

ವಲಯ ಮಟ್ಟದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ನೇತೃತ್ವದ ನಾಲ್ಕು ಸದಸ್ಯರ ಟೀಮ್ ಕಾರ್ಯಾಚರಣೆ ನಡೆಸಲಿದೆ. ಪ್ರಕರಣ ಬೆಳಕಿಗೆ ಬಂದಿರುವ ಪ್ರದೇಶಗಳಿಗೆ ಈ ತಂಡ ಭೇಟಿ ನೀಡಿ ತುರ್ತು ಚಿಕಿತ್ಸೆ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಕಳೆದ ವಾರವಷ್ಟೇ ಬೆಂಗಳೂರು ನಗರ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆಗ ಎಲ್ಲಾ ತಹಬದಿಯಲ್ಲಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದರು.

ಆದರೂ ಎಚ್1ಎನ್1 ಮರಣ ಮೃದಂಗ ಬಾರಿಸಲಾರಂಭಿಸಿದ ಮೇಲೆ ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಬಿಬಿಎಂಪಿ ಕೊನೆಗೂ ಎಚ್ಚೆತ್ತುಕೊಂಡು ರೋಗ ತಡೆಯಲು ಕ್ರಮ ಕೈಗೊಳ್ಳಲು ಮುಂದಾಗಿದೆ.

ಅಗತ್ಯ ಕ್ರಮ ಕೈಗೊಳ್ಳಲಾಗಿದೆ:
ಇತ್ತೀಚೆಗಷ್ಟೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಎಚ್1ಎನ್1 ಕುರಿತು ಸಭೆ ನಡೆಸಿ ಚರ್ಚಿಸಲಾಗಿದೆ. ಅವರ ಸೂಚನೆ ಮೇರೆಗೆ ರೋಗ ತಡೆಗಟ್ಟಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿಳಿಸಿದರು.

ಈಗಾಗಲೇ ಲಿಂಕ್ ಮತ್ತು ಆಶಾ ಕಾರ್ಯಕರ್ತೆಯರು ನಗರದ ವಿವಿಧ ಪ್ರದೇಶಗಳಲ್ಲಿ ಮನೆ ಮನೆಗಳಿಗೆ ತೆರಳಿ ಸ್ವಚ್ಛತೆ ಹಾಗೂ ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಮನವರಿ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ