ತಿರುವನಂತಪುರಂ/ನೀಲಕ್ಕಳ್, ಅ.19- ಸುಪ್ರೀಂಕೋರ್ಟ್ ಐತಿಹಾಸಿಕ ಆದೇಶದ ನಡುವೆಯೂ ಶಬರಿ ಮಲೆ ಶ್ರೀ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಪ್ರತಿಭಟನಾಕಾರರು ತಡೆಯೊಡ್ಡಿದ್ದರಿಂದ ತೀವ್ರ ವಿವಾದಕ್ಕೆ ಗುರಿಯಾಗಿರುವ ಗಿರಿ ದೇಗುಲ ಪ್ರದೇಶದಲ್ಲಿ ಇಂದೂ ಕೂಡ ಹೋರಾಟದ ಕಿಚ್ಚು ಮುಂದುವರಿದಿದ್ದು, ಅಹಿತಕರ ಘಟನೆಗಳು ನಡೆದಿವೆ.
ಇದೇ ವೇಳೆ ಮಹಿಳೆಯರ ಪ್ರವೇಶ ವಿರೋಧಿಸಿ ಶಬರಿಮಲೆ ರಕ್ಷಣಾ ಸಮಿತಿ ಸೇರಿದಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿರುವ 12 ತಾಸುಗಳ ಕೇರಳ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ.
ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದರೂ, ಕೆಲವೆಡೆ ಸರ್ಕಾರಿ ಬಸ್ಗಳು ಮತ್ತು ಇತರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಶಬರಿಮಲೆ ಸಂರಕ್ಷಣಾ ಸಮಿತಿ ಹಾಗೂ ಮಾಜಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಅಧ್ಯಕ್ಷ ಪ್ರವೀಣ್ ತೊಗಾಡಿಯಾ ನೇತೃತ್ವದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಇಂದು ಕೇರಳದಲ್ಲಿ ಬಂದ್ಗೆ ಕರೆ ನೀಡಿದ್ದು, ಬಂದ್ಗೆ ಬಿಜೆಪಿ ಬೆಂಬಲ ನೀಡಿದೆ.
ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ರಾಜ್ಯದ ಕೆಲವು ಭಾಗಗಳಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಲವು ಬಸ್ಗಳು ಮತ್ತು ಇತರ ವಾಹನಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆಟೋ ಮತ್ತು ಟ್ಯಾಕ್ಸಿ ಸಂಚಾರ ವಿರಳವಾಗಿತ್ತು.
ಕಲ್ಲು ತೂರಾಟ ಮತ್ತು ದಾಂಧಲೆಯಲ್ಲಿ ತೊಡಗಿದ್ದ ಕೆಲವು ಕಿಡಿಗೇಡಿಗಳನ್ನು ಪೆÇಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಯ ಮುಖ್ಯಸ್ಥಳಗಳಾದ ಪಟ್ಟಣಂತಿಟ್ಟ ಜಿಲ್ಲೆಯ ಪಂಬಾ, ನೀಲಕ್ಕಳ್(ನೀಲಕಂಠ), ಎರುಮೇಲಿ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ವಿಶೇಷ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ. ಈ ಪ್ರದೇಶಗಳೂ ಸೇರಿದಂತೆ ಹಲವು ಸ್ಥಳಗಳಲ್ಲಿ ಪ್ರತಿಬಂಧಕಾಜ್ಞೆಯನ್ನು ಮುಂದುವರಿಸಲಾಗಿದೆ.
ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಪೆÇಲೀಸ್ ಇಲಾಖೆ ಪಂಪಾ ಹಾಗೂ ನಿಲಕ್ಕಲ್ ಪ್ರದೇಶದಲ್ಲಿ 700 ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸರ್ವೋನ್ನತ ನ್ಯಾಯಾಲಯದ ಅದೇಶವಿದ್ದರೂ ಸಹ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತೆಯರನ್ನು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಅಡ್ಡಿಪಡಿಸಲಾಯಿತು. ಪ್ರತಿಭಟನಾಕಾರರು ಮಾರ್ಗ ಮಧ್ಯೆಯೇ ಸ್ತ್ರೀಯರನ್ನು ತಡೆದಿದ್ದರಿಂದ ನಿನ್ನೆ ಬೆಳಗ್ಗೆಯಿಂದ ಶಬರಿಮಲೆ ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು, ಇಂದು ಕೂಡ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ಉದ್ರಿಕ್ತ ಗುಂಪು ತಡೆಯುತ್ತಿವೆ.
ಇಂದು ಕೂಡ ಕೆಲವು ಪತ್ರಕರ್ತೆಯರೂ ಸೇರಿದಂತೆ ಹಲವು ಮಹಿಳೆಯರು ಶಬರಿ ಮಲೆ ಪ್ರವೇಶಿಸಲು ಯತ್ನಿಸಿದರಾದರೂ ಅವರನ್ನು ಪ್ರತಿಭಟನಾಕಾರರು ತಡೆದು ವಾಪಸ್ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಇಂದು ಕೂಡ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ನಿನ್ನೆಯಿಂದ ಅಯ್ಯಪ್ಪ ಸ್ವಾಮಿ ದೇಗುಲ ತೆರೆದು ದೇವರ ದರ್ಶನ ಆರಂಭವಾಗಿದ್ದರೂ ಮೊದಲ ದಿನ ಮಹಿಳೆಯರಿಗೆ ಅವಕಾಶ ಲಭಿಸಲಿಲ್ಲ. ಪಂಬಾ, ನೀಲಕ್ಕಳ್ ಗ್ರಾಮಗಳೂ ಸೇರಿದಂತೆ ಶಬರಿಮಲೆಗೆ ತೆರಳುವ ಮಾರ್ಗವು ನಿನ್ನೆ ಅಕ್ಷರಶಃ ರಣರಂಗವಾಗಿತ್ತು.
ಕಲ್ಲು ತೂರಾಟ, ದಾಂಧಲೆ ಮತ್ತು ಪೆÇಲೀಸರ ಲಾಠಿ ಪ್ರಹಾರದಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಬೆಂಗಳೂರಿನ ವರದಿಗಾರ್ತಿ ಸೇರಿದಂತೆ 12 ಪತ್ರಕರ್ತರ ಮೇಲೆ ಉದ್ರಿಕ್ತರು ದಾಳಿ ಮಾಡಿದ್ದರು. ಕೆಲವು ಕಿಡಿಗೇಡಿಗಳನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ
ಇಂದೂ ಕೂಡ ಈ ಪ್ರಕ್ಷುಬ್ಧ ಸ್ಥಳಗಳಲ್ಲಿ ವ್ಯಾಪಕ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇಂದು ಕೂಡ ಪ್ರತಿಭಟನೆ, ಹಿಂಸಾಚಾರ ಮರುಕಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಅಭೂತಪೂರ್ವ ಬಿಗಿಭದ್ರತೆ ಒದಗಿಸಲಾಗಿದೆ.