ನವದೆಹಲಿ, ಅ.18-ಕಸ್ಟಮ್ಸ್ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಲ್ಲಿ 16 ಮಂದಿಯನ್ನು ಬಂಧಿಸಿ ಒಟ್ಟು 106 ಕೋಟಿ ರೂ.ಗಳ ಮೌಲ್ಯದ ವಿದೇಶಿ ಅಕ್ರಮ ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ.
2014ರಿಂದ ಇಲ್ಲಿಯವರೆಗೆ ಸೀಮಾಸುಂಕ ಅಧಿಕಾರಿಗಳು ಈ ಸಂಬಂಧ 43 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇಂಥ ಅಕ್ರಮ ವಿದೇಶಿ ಪಟಾಕಿಗಳನ್ನು ತಡೆಗಟ್ಟಲು ಮತ್ತು ಪತ್ತೆ ಮಾಡಲು ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ
ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿ ವಿದೇಶಿ ಅಕ್ರಮ ಪಟಾಕಿಗಳು, ಸಿಡಿಮದ್ದುಗಳು ಮತ್ತು ಬಾಣ-ಬಿರುಸುಗಳ ಅನಧಿಕೃತ ದಾಸ್ತಾನು ಮತ್ತು ಮಾರಾಟದ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿರುವ ಕಸ್ಟಮ್ಸ್ ಅಧಿಕಾರಿಗಳು ಈ ಸಂಬಂಧ ಜಾಹೀರಾತುಗಳ ಮೂಲಕ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ಧಾರೆ.
ಅಕ್ರಮವಾಗಿ ಆಮದು ಮಾಡಿಕೊಳ್ಳುವ ವಿದೇಶಿ ತಯಾರಿಕೆಯ ಪಟಾಕಿಗಳು ಮತ್ತು ಸಿಡಿಮದ್ದುಗಳು ಸಲ್ಫರ್(ಗಂಧಕ) ಅಥವಾ ಸಲ್ಫರೇಟ್ ಒಳಗೊಂಡಿದ್ದು, ಯಾವುದೇ ಕ್ಲೋರೆಟ್ ಜೊತೆಗಿನ ಇದರ ಮಿಶ್ರಣವು ಹಾನಿಕಾರಕ ಸ್ವರೂಪದ್ದಾಗಿರುತ್ತದೆ ಹಾಗೂ ಸ್ಥಳದಲ್ಲೇ ಸ್ಫೋಟಗೊಳ್ಳಬಹುದಾಗಿರುತ್ತದೆ. ಇಂಥ ಪಟಾಕಿಗಳು ಜೀವಕ್ಕೆ ಅಪಾಯವಾಗಿದ್ದು, ಅವಘಡಗಳಿಗೆ ಕಾರಣವಾಗುತ್ತದೆ ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಿದೇಶಿ ಮೂಲದ ಪಟಾಕಿಗಳನ್ನು ಇಟ್ಟುಕೊಳ್ಳುವುದು ಮತ್ತು ಮಾರಾಟ ಮಾಡುವುದು ಭಾರತದಲ್ಲಿ ಅಕ್ರಮ ಮತ್ತು ಕಾನೂನು ಬಾಹಿರ ಹಾಗೂ ಕಾನೂನು ಅಡಿ ಶಿಕ್ಷಾರ್ಹ ಅಪರಾಧ.
ಸುರಕ್ಷತೆ ಮತ್ತು ಭದ್ರತೆ ಹಿತದೃಷ್ಟಿಯಿಂದ, ನಿಮ್ಮ ನಗರದಲ್ಲಿ ವಿದೇಶಿ ಮೂಲದ ಇಂಥ ಪಟಾಕಿಗಳನ್ನು ಹೊಂದಿರುವ ಅಥವಾ ಮಾರಾಟಗಳ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ದಯವಿಟ್ಟು ಅಧಿಕಾರವ್ಯಾಪ್ತಿಯ ಕಸ್ಟಮ್ಸ್ ಅಥವಾ ಸರಕುಗಳು ಮತ್ತು ಸೇವೆಗಳ (ಜಿಎಸ್ಟಿ) ಅಧಿಕಾರಗಳಿಗೆ ವರದಿ ಮಾಡುವಂತೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಈ ಹಬ್ಬದ ಸಂದರ್ಭದಲ್ಲಿ ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ.