ಬೆಂಗಳೂರು, ಅ.16-ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರೀ ವಿವಾದಕ್ಕೀಡಾಗಿ ಕೋಮುಗಲಭೆಗೆ ಎಡೆಮಾಡಿಕೊಟ್ಟಿದ್ದ ವಿವಾದಾತ್ಮಕ ಟಿಪ್ಪುಜಯಂತಿ ಈ ಬಾರಿ ಮತ್ತೆ ಸದ್ದು ಮಾಡುವ ಲಕ್ಷಣಗಳು ಗೋಚರಿಸಿವೆ.
ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ನ.9ರಂದು ಟಿಪ್ಪು ಜಯಂತಿ ಆಚರಣೆ ಮಾಡಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ನಡೆಸಿದೆ. ಒಂದು ವೇಳೆ ರಾಜ್ಯ ಸರ್ಕಾರ ಈ ಜಯಂತಿ ಮಾಡಲು ಮುಂದಾದರೆ ಬಿಜೆಪಿ ಇದನ್ನು ಪ್ರಬಲವಾಗಿ ವಿರೋಧಿಸಲು ಸಜ್ಜಾಗಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಿಂದೂ ಮತಗಳ ದೃವೀಕರಣದ ಮೇಲೆ ಕಣ್ಣಿಟ್ಟಿರುವ ಆರ್‍ಎಸ್‍ಎಸ್ ನಾಯಕರು ಯಾವುದೇ ಕಾರಣಕ್ಕೂ ಈ ಬಾರಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ಮಾಡಿಕೊಡಬಾರದು. ಸರ್ಕಾರ ಆಚರಿಸಲು ಮುಂದಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧ್ದವಾಗುವಂತೆ ಬಿಜೆಪಿಗೆ ಸೂಚನೆ ಕೊಟ್ಟಿದೆ.
ಕೆಲ ದಿನಗಳ ಹಿಂದೆ ಆರ್‍ಎಸ್‍ಎಸ್‍ನ ಕಚೇರಿ ಕೇಶವಕೃಪಾದಲ್ಲಿ ನಡೆದ ಸಂಘ ಪರಿವಾರದ ಪ್ರಮುಖ ನಾಯಕರ ಸಭೆಯಲ್ಲಿ ಟಿಪ್ಪು ಜಯಂತಿಗೆ ಸರ್ಕಾರ ಕೈ ಹಾಕಿದರೆ ಬಿಜೆಪಿ ಅದನ್ನು ಪ್ರಬಲವಾಗಿ ವಿರೋಧಿಸಬೇಕೆಂದು ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವರ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆ ಮಾಡಿದ ಪ್ರತಿಫಲವಾಗಿಯೇ ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು ಸೇರಿದಂತೆ ಮತ್ತಿತರ ಕಡೆ ಈ ಬಾರಿ ನಾವು ಹೆಚ್ಚಿನ ಸ್ಥಾನಗಳಿಸಲು ಸಾಧ್ಯವಾಯಿತು.
ಟಿಪ್ಪು ಹಿಂದೂ ವಿರೋಧಿ ಎಂಬುದನ್ನು ಬಿಂಬಿಸಿದ ಪರಿಣಾಮವೇ ಹಿಂದೂ ಮತಗಳ ಕ್ರೂಢೀಕರಣದಿಂದ ಬಿಜೆಪಿ ಗೆದ್ದು ಕಾಂಗ್ರೆಸ್‍ಗೆ ಮುಖಭಂಗವಾಯಿತು. ಹಿಂದು ಮತಗಳ ದೃವೀಕರಣವಾಗಬೇಕಾದರೆ ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸುವಂತೆ ಸಂಘ ಪರಿವಾರದವರು ಸೂಚನೆ ಕೊಟ್ಟಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ಎಂಬುದನ್ನು ವ್ಯವಸ್ಥಿತವಾಗಿ ಪ್ರಚಾರ ನಡೆಸಿದ್ದರಿಂದಲೇ ನಾವು ಅಧಿಕಾರ ಹಿಡಿಯಲು ಸಾಧ್ಯವಾಗದೇ ಇದ್ದರೂ 104 ಸ್ಥಾನ ಗೆಲ್ಲಲ್ಲು ಕಾರಣವಾಯಿತು.
ಈಗ ಕನಿಷ್ಠ ಪಕ್ಷ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 2014ರಲ್ಲಿ ಗೆದ್ದಿರುವ ಸ್ಥಾನಗಳನ್ನು ಉಳಿಸಿಕೊಳ್ಳಬೇಕೆಂಂದರೆ ಹಿಂದೂ ಮತಗಳ ದೃವೀಕರಣವಾಗಲೇಬೇಕು. ಈ ಸರ್ಕಾರ ವೋಟ್‍ಬ್ಯಾಂಕಿಗಾಗಿ ಅಲ್ಪಸಂಖ್ಯಾತರನ್ನು ಓಲೈಸಿ ಹಿಂದೂಗಳನ್ನು ಕಡೆಗಣಿಸುತ್ತದೆ ಎಂಬುದು ಪ್ರಚಾರದ ಮುಖ್ಯ ಅಸ್ತ್ರವಾಗಬೇಕು.
ಹೀಗಾಗಿ ಪ್ರತಿಭಟನೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಆರ್‍ಎಸ್‍ಎಸ್ ನಾಯಕರು ಸಲಹೆ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ಮುಂದಾದಾಗ ಭಾರೀ ವಿವಾದವೇ ಭುಗಿಲೆದ್ದಿತ್ತು.
ಬಿಜೆಪಿ ಸೇರಿದಂತೆ ಸಂಘ ಪರಿವಾರದ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಮಡಿಕೇರಿಯಂತು ಎರಡು ದಿನ ಹೊತ್ತಿ ಉರಿದಿತ್ತು. ವಿಎಚ್‍ಪಿ ಮುಖಂಡ ಕುಟ್ಟಪ್ಪ ಎಂಬುವರು ಸಾವನ್ನಪ್ಪಿದ್ದರು. ಈಗ ಪುನಃ ಸಮ್ಮಿಶ್ರ ಸರ್ಕಾರ ಟಿಪ್ಪು ಜಯಂತಿಗೆ ಕೈ ಹಾಕಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.