ನೀಲಕಂಠ: ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ಹಿನ್ನಲೆಯಲ್ಲಿ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಬೆಂಬಲ ನೀಡಿದ್ದರೂ ಇಂದು ಶಬರಿಮಲೆಯ ನೀಲಕಂಠದಲ್ಲಿ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳಾ ಭಕ್ತಾಧಿಗಳನ್ನು ಪ್ರತಿಭಟನಾಕಾರರು ಹೊರದಬ್ಬಿದ ಘಟನೆ ನಡೆದಿದೆ.
ತುಳ್ಳಂ ಪೂಜೆಗಾಗಿ ನಾಳೆಯಿಂದ ದೇವಸ್ಥಾನ ಪುನರ್ ಆರಂಭಗೊಳ್ಳಲಿದೆ. ಈ ಮಧ್ಯೆ ಯಾರೊಬ್ಬರು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಶಬರಿಮಲೆಗೆ ತೆರಳುವ ಎಲ್ಲ ಭಕ್ತರೂ ಪೂಜೆ ಸಲ್ಲಿಸಲು ಸರ್ಕಾರ ಎಲ್ಲಾ ವ್ಯವ್ಯಸ್ಥೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಪಂಪಾ ನದಿ ದಂಡೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಸಾಧ್ಯತೆ ಇದೆ. ಈ ಹಿಂದೆಯೂ ಕೂಡಾ ಮಹಿಳಾ ಅಧಿಕಾರಿಗಳನ್ನು ಆಯೋಜಿಸಲಾಗಿತ್ತು, ಆದಾಗ್ಯೂ, ಸನ್ನಿದಿಯಲ್ಲಿ ಮಹಿಳಾ ಅಧಿಕಾರಿ ನಿಯೋಜಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪರ ಹಾಗೂ ವಿರೋಧವಾದ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಸುಪ್ರೀಂಕೋರ್ಟ್ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದ್ದರೆ. ಆಡಳಿತಾ ರೂಢ ಸಿಪಿಐ( ಎಂ) ಅವರಿಗೆ ಪ್ರತಿಯಾಗಿ ನಡೆದುಕೊಳ್ಳುತ್ತಿದೆ.
ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದ ಕಣ್ಣೂರು ಜಿಲ್ಲೆಯ ಮಲಯಾಳಂ ಮಹಿಳೆ ರೇಷ್ಮಾ ನಿಶಾಂತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಾಗೂ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಆದಾಗ್ಯೂ, ತಮ್ಮ ನಿರ್ಧಾರಕ್ಕೆ ಪತಿ ಹಾಗೂ ಇನ್ನಿತರರು ಬೆಂಬಲಿಸಿದ್ದು, ಸರ್ಕಾರ ಹಾಗೂ ಪೊಲೀಸರು ಅಗತ್ಯ ರಕ್ಷಣೆ ನೀಡಲಿದ್ದಾರೆ ಎಂದು ಅವರು ಹೇಳಿದ್ದು. ಇನ್ನಿತರ ಕೆಲ ಮಹಿಳೆಯರೊಂದಿಗೆ ಯಾತ್ರೆ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.