ಬೆಂಗಳೂರು: ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರ ಸಾರಿದ್ದ ಖಡಕ್ ಐಪಿಎಸ್ ಅಧಿಕಾರಿ ಎಸ್ಪಿ ಅಣ್ಣಾಮಲೈರಾಜ್ಯ ರಾಜಧಾನಿಗೆ ಕಾಲಿಡುವ ಕಾಲ ಸನ್ನಿಹಿತವಾಗಿದೆ. ರಾತ್ರೋರಾತ್ರಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು, ಅಣ್ಣಾಮಲೈ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಉಪ ಆಯುಕ್ತರಾಗಿ ಅಣ್ಣಾಮಲೈ ಅವರನ್ನು ನೇಮಿಸಲಾಗಿದೆ. ಹಿರಿಯ ಐಪಿಎಸ್ ಅಧಿಕಾರಿ ಹರಿಶೇಖರನ್ – ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಅಜಯ್ ಹಿಲೋರಿ – 1ನೇ ಬೆಟಾಲಿಯನ್ ಕೆಎಸ್ಆರ್ಪಿ, ರಾಹುಲ್ ಕುಮಾರ್ – ಪೂರ್ವ ವಿಭಾಗದ ಡಿಸಿಪಿ, ಬೆಂಗಳೂರು ನಗರ, ಹರೀಶ್ ಪಾಂಡೆ – ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾವಣೆಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಾದರೂ ಅದು ಗೃಹ ಸಚಿವ ಡಾ. ಜಿ. ಪರಮೇಶ್ವರರ ಗಮನಕ್ಕೆ ಬಂದಿರಲಿಲ್ಲ. ಗೃಹ ಸಚಿವರಿಗೆ ನೆಪಕ್ಕೂ ಒಂದು ಮಾತು ಹೇಳದೇ ಪದ್ಮನಾಭನಗರದಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವರ್ಗಾವಣೆ ಆದೇಶ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಪರಮೇಶ್ವರ್ ಸಮನ್ವಯ ಸಮಿತಿ ಸಭೆಯಲ್ಲಿ ತಮ್ಮ ನೋವು ತೋಡಿಕೊಂಡಿದ್ದರು.
ಗೃಹ ಇಲಾಖೆಯ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡುವಾಗ ಗಮನಕ್ಕಾದರೂ ತೆರಬೇಕಿತ್ತು ಎಂದು ಸಮನ್ವಯ ಸಮಿತಿ ಕುಮಾರಸ್ವಾಮಿಯವರ ಮೇಲೆ ಚಾಟಿ ಬೀಸಿತ್ತು. ಈ ಕಾರಣಕ್ಕಾಗಿಯೇ ಪರಮೇಶ್ವರ್ ಅವರು ಇದೀಗ ರಾತ್ರೋರಾತ್ರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಮೂಲಕವಾದರೂ ಖಡಕ್ ಅಧಿಕಾರಿ ಅಣ್ಣಾಮಲೈ ಬೆಂಗಳೂರಿಗೆ ಬರುತ್ತಿದ್ದಾರೆ.