ಲಖನೌ: ಅಲಹಾಬಾದ್ ನಗರಕ್ಕೆ ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಲಾಗಿದ್ದು, ಈ ಕುರಿತ ಗೊತ್ತುವಳಿಗೆ ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಹಿನ್ನಲೆಯಲ್ಲಿ ಇಂದಿನಿಂದಲೇ ಅಲಹಾಬಾದ್ ನಗರವನ್ನು ಪ್ರಯಾಗ್ ರಾಜ್ ಎಂದು ಕರೆಯುವಂತೆ ಸುತ್ತೋಲೆ ಹೊರಡಿಸಲಾಗಿದೆ. ಈ ಕುರಿತು ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ.
ಅಂತೆಯೇ ಈ ಕುರಿತಂತೆ ಹೊಸ ಆದೇಶವನ್ನು ಪಾಲನೆ ಮಾಡಲು ಸರಕಾರದ ಪ್ರತಿಯೊಂದು ಇಲಾಖೆಗೂ ಸುತ್ತೋಲೆ ಕಳುಹಿಸಲಾಗುವುದು ಎಂದು ಸಂಪುಟ ತಿಳಿಸಿದೆ.
ಅಲ್ಲದೇ ಅಲಹಾಬಾದ್ ಮರುನಾಮಕರಣದ ಕುರಿತು ಸುಳಿವು ಬಿಟ್ಟುಕೊಟ್ಟಿದ್ದ ಸಿಎಂ ಯೋಗಿ ಆದಿತ್ಯಾನಾಥ್ ಅವರು,’ಗಂಗೆ ಹಾಗೂ ಯಮುನೆಯರು ಕೂಡುವ ಪವಿತ್ರ ಸಂಗಮ ಸ್ಥಳವಾದ ಕಾರಣ ಮತ್ತು ಈ ಊರು ಎಲ್ಲ ಪ್ರಯಾಗಗಳ ರಾಜನಾದ ಕಾರಣ ಅಲಹಾಬಾದ್ ಅನ್ನು ಪ್ರಾಯಾಗ್‌ರಾಜ್ ಎಂದು ಕರೆಯುತ್ತೇವೆ. ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಕರೆಯಬೇಕೆಂಬುದು ಕೆಲವರ ಆಶಾಯವಾಗಿದೆ. ಎಲ್ಲರೂ ಒಪ್ಪಿದರೆ ಈ ನಗರವನ್ನು ಪ್ರಯಾಗ್‌ರಾಜ್ ಎಂದು ಕರೆಯುತ್ತೇವೆ. ಇದೊಂದು ಉತ್ತಮ ಆರಂಭವಾಗಲಿದೆ’ ಎಂದು ಹೇಳಿದ್ದರು.