ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶಕ್ಕೆ ಸಂಬಂಧಿಸಿದಂತೆ ದೇವಸ್ಥಾನ ಮಂಡಳಿ ಹಾಗೂ ಪಂಡಲಂ ರಾಯಲ್ ಕುಟುಂಬ ಸೇರಿದಂತೆ ವಿವಿಧ ಸಂಘಟನೆಗಳೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ.
ಸಭೆಯಿಂದ ಹೊರ ನಡೆದ ಪಂಡಲಂ ಪ್ಯಾಲೇಸ್ ಸಮನ್ವಯ ಸಮಿತಿ ಅಧ್ಯಕ್ಷ ಶಶಿಕುಮಾರ್ ವರ್ಮಾ, ಭಕ್ತಾಧಿಗಳು ಎತ್ತಿದ ಸಮಸ್ಯೆಗಳ ಬಗ್ಗೆ ಸಹಮತ ಮೂಡದೆ ಸಭೆ ವಿಫಲವಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಲಾಯಿತು ಎಂದು ಹೇಳಿದ್ದಾರೆ.
ಸಭೆಯಲ್ಲಿ ಭಕ್ತಾಧಿಗಳ ಬೇಡಿಕೆಯನ್ನು ತಿರಸ್ಕರಿಸಿದ ಟಿಡಿಬಿ, ಶುಕ್ರವಾರ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿತು.
ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲು ಧಾರ್ಮಿಕ ಮುಖಂಡರು ಹಾಗೂ ಪಂಡಲಂ ಪ್ಯಾಲೇಸ್, ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘಂ, ಮತ್ತು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಸೇರಿದಂತೆ ಮತ್ತಿತರ ಸಂಘಟನೆಗಳ ಮನವೊಲಿಸಲು ಶೀಘ್ರದಲ್ಲಿಯೇ ಸಭೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.