ಬೆಂಗಳೂರು: ಚುನಾವಣೆಗೆ ಅಷ್ಟಾಗಿ ಒಲವು ತೋರದ ಮಾಜಿ ಶಾಸಕ ಮಧು ಬಂಗಾರಪ್ಪನವರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ದೊಡ್ಡಗೌಡರು, ಶಿವಮೊಗ್ಗ ಜಿಲ್ಲೆಯ ಲೋಕಸಭಾ ಉಪಚುನಾವಣೆಗೆ ಮಧು ಬಂಗಾರಪ್ಪನವರನ್ನು ಕಣಕ್ಕಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಬಗ್ಗೆ ಚರ್ಚೆ ವೇಳೆ ಮಧು ಬಂಗಾರಪ್ಪ ಅವರನ್ನೇ ಅಂತಿಮ ಮಾಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಇದಕ್ಕಾಗಿ ವಿದೇಶದಲ್ಲಿದ್ದ ಮಧು ಅವರಿಗೆ ಪ್ರವಾಸ ಮೊಟಕುಗೊಳಿಸಿ ಹಿಂದಿರುಗುವಂತೆ ಜೆಡಿಎಸ್ ವರಿಷ್ಠರು ಸೂಚನೆ ಕೂಡ ನೀಡಿದ್ದರು.
ಜೆಡಿಎಸ್ ವರಿಷ್ಠರ ಆಜ್ಞೆ ಮೇರೆಗೆ ಪ್ರವಾಸ ಮೊಟಕುಗೊಳಿಸಿ ನಿನ್ನೆ ಬೆಂಗಳೂರಿಗೆ ಬಂದ ಮಧು, ತಡರಾತ್ರಿ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಚುನಾವಣೆಗೆ ಸ್ಪರ್ಧಿಸುವ ಕುರಿತು ಚರ್ಚೆ ನಡೆಸಿ, ರಾತ್ರಿಯೇ ‘ಬಿ ಫಾರಂ’ ಪಡೆದುಕೊಂಡಿದ್ದಾರೆ.
ಈ ಹಿಂದೆ 2014ರಲ್ಲಿ ಲೋಕಸಭಾ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಗೀತಾ ಶಿವರಾಜ್ ಕುಮಾರ್ ಟಿಕೆಟ್ ಪಡೆದಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋತ ಹಿನ್ನೆಲೆಯಲ್ಲಿ ಈ ಬಾರಿ ಅವರ ಸಹೋದರ ಮಧು ಬಂಗಾರಪ್ಪ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ.
ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಇನ್ನು ಕಾಂಗ್ರೆಸ್ಗೆ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದು, ಬೆಂಬಲ ನೀಡುವುದಾಗಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಜೆಡಿಎಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ.