ಬೆಂಗಳೂರು, ಅ.15-ತಾವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ದುಂದು ವೆಚ್ಚ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸಚಿವಾಲಯದಲ್ಲಿ 450 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ ಎಂದರು.
ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ 450 ಮಂದಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಮಾಧ್ಯಮ ವರದಿ ಆಧಾರ ರಹಿತ ಎಂದರು.
ಆಡಳಿತಕ್ಕೆ ಸಂಬಂಧಿಸಿದಂತೆ ದುಂದುವೆಚ್ಚ ಮಾಡುತ್ತಿಲ್ಲ. ಸಾಧ್ಯವಾದಷ್ಟು ಮಟ್ಟಿಗೆ ವೆಚ್ಚ ಕಡಿಮೆ ಮಾಡಲಾಗುತ್ತಿದೆ. ಆರ್ಟಿಐ ಕಾರ್ಯಕರ್ತರೊಬ್ಬರು ಮಾಧ್ಯಮದವರನ್ನು ದಾರಿ ತಪ್ಪಿಸಿದ್ದಾರೆ. 184 ಮಂದಿ ಗುತ್ತಿಗೆ ಆಧಾರದ ಮೇಲೆ ನೌಕರರು ಬೇರೆ ಬೇರೆ ಇಲಾಖೆಯ 56 ಮಂದಿ ಸೇರಿದಂತೆ ಒಟ್ಟು 250 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ಶೆಟ್ಟರ್, ಸಿದ್ದರಾಮಯ್ಯ ಅವರ ಕಾಲದಲ್ಲೂ ಇದೇ ರೀತಿ ಸಿಬ್ಬಂದಿ ಕಾರ್ಯನಿರ್ವಹಣೆಯಿತ್ತು. ಅಬಲೆಯರು ಮತ್ತು ವಿಕಲಚೇತನರು ಸೇರಿದಂತೆ ಆರು ಮಂದಿಗೆ ಮಾತ್ರ ಉದ್ಯೋಗ ನೀಡಲಾಗಿದೆ ಎಂದರು.
ಮೈಸೂರಿನ ಯುವ ದಸರಾ ಕಾರ್ಯಕ್ರಮಕ್ಕೆ ತಾವು ವಿಶೇಷ ವಿಮಾನ ಅಥವಾ ಹೆಲಿಕಾಪ್ಟರ್ನಲ್ಲಿ ಪ್ರಯಾಣ ಮಾಡದೆ ಕಾರಿನಲ್ಲಿ ಪ್ರಯಾಣ ಮಾಡಿದ್ದೇನೆ. ನಿನ್ನೆ ಮಂಗಳೂರಿಗೆ ಹೋಗಿದ್ದಾಗಲೂ ವಿಶೇಷ ವಿಮಾನದ ಬದಲಿಗೆ ರೆಗ್ಯೂಲರ್ ವಿಮಾನದಲ್ಲೇ ಪ್ರಯಾಣ ಮಾಡಿ ಸಾಧ್ಯವಾದಷ್ಟು ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಸಚಿವರ ಕಾರು ಖರೀದಿಗೂ ಅವಕಾಶ ಮಾಡಿಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.