ಸಿದ್ದರಾಮಯ್ಯ, ಡಿಕೆಶಿ ಜೊತೆ ಪ್ರಚಾರ ಮಾಡುತ್ತೀನಿ ಎಂದ ದೇವೇಗೌಡರು

ಬೆಂಗಳೂರು : ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿರುವ ನಾವು ಈಗ ಉಪಚುನಾವಣೆಗೂ ಮೈತ್ರಿಯಾಗಿದ್ದು, ಒಟ್ಟಾಗಿಯೇ ಚುನಾವಣೆ ಎದುರಿಸುತ್ತೇವೆ ಎಂದು ಜೆಡಿಎಸ್​ ವರಿಷ್ಠ ದೇವೇಗೌಡರು ತಿಳಿಸಿದರು.
ಈಗಾಗಲೇ ಮಂಡ್ಯ, ರಾಮನಗರ, ಶಿವಮೊಗ್ಗವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದ್ದು, ಬಳ್ಳಾರಿ, ಜಮಖಂಡಿಯಲ್ಲಿ  ಕಾಂಗ್ರೆಸ್​ ಬಲಿಷ್ಠವಾಗಿರುವುದರಿಂದ ಆ ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಇಂದು, ನಾಳೆಯೊಳಗೆ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಒಟ್ಟಾಗಿ ಅಭ್ಯರ್ಥಿಪರ ಪ್ರಚಾರ ನಡೆಸುತ್ತೇವೆ. ಇನ್ನು ಎರಡುದಿನ ಕಾಲಾವಕಾಶವಿದ್ದು ಬಳಿಕ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ನಾನು ಈ ಬಾರಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​, ಸಿಎಂ ಕುಮಾರಸ್ವಾಮಿ ಒಟ್ಟಾಗಿ ಪ್ರಚಾರ ನಡೆಸುತ್ತೇವೆ ಎಂದರು.
ಲೋಕಸಭಾ ಚುನಾವಣೆಗೂ ಕೇಂದ್ರದಲ್ಲಿ ಮಹಾಮೈತ್ರಿಯಾಗಿರುವ ಹಿನ್ನಲೆ ಈ ಉಪಚುನಾವಣೆಯ ಹೋರಾಟದಲ್ಲಿ ಈ ಮೈತ್ರಿಕೂಟ ಮಹತ್ವ ಪಡೆದಿದೆ. ಈ ಮೈತ್ರಿ ಎರಡು ಪಕ್ಷಗಳಿಗೂ ಅಧಿಕಾರ ನಡೆಸಲು ಅನಿವಾರ್ಯವಾಗಿದ್ದು, ಇದು ಲೋಕಸಭೆಗೂ ದಿಕ್ಸೂಚಿಯಾಗಲಿದೆ ಎನ್ನಲಾಗಿದೆ.
ಅಲ್ಲದೇ ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಡುವುದು ನಮ್ಮ ಉದ್ದೇಶ ಎಂದಿರುವ ಕಾಂಗ್ರೆಸ್​, ಜೆಡಿಎಸ್​ ನಾಯಕರು ಈ ಮೈತ್ರಿ ಮೂಲಕ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಿದೆ. ಅಲ್ಲದೇ ರಾಜ್ಯದ ಆಡಳಿತ ನಡೆಸಿರುವ ಮೈತ್ರಿ ಸರ್ಕಾರದಲ್ಲಿ ಒಗ್ಗೂಟ್ಟಿನ ಪ್ರದರ್ಶನ ಕೂಡ ಈ ಮೂಲಕ ಮಾಡಲು ತಯಾರಿ ನಡೆಸಿದ್ದು, ಈ ಉಪಚುನಾವಣೆಗಳು ಮೈತ್ರಿಕೂಟಕ್ಕೆ ಸವಾಲಿನ ವಿಷಯವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ