ನವದೆಹಲಿ : #MeToo ಅಭಿಯಾನಕ್ಕೆ ಕೇಂದ್ರ ಸರ್ಕಾರದ ಮೊದಲ ಸಚಿವರ ತಲೆದಂಡವಾಗಿದೆ. ಹತ್ತು ಮಂದಿ ಪತ್ರಕರ್ತೆಯರ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ವಿದೇಶಾಂಗ ರಾಜ್ಯ ಖಾತೆ ಸಚಿವ ಎಂ.ಜೆ. ಅಕ್ಬರ್ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷ ಸೂಚನೆ ನೀಡಿದೆ. ಅದರಂತೆ ಅಕ್ಬರ್ ಅವರು ಇ-ಮೇಲ್ ಮೂಲಕ ರಾಜೀನಾಮೆಯನ್ನು ಕಳುಹಿಸಿಕೊಟ್ಟಿದ್ದಾರೆ.
ಲೈಂಗಿಕ ಆರೋಪ ಕೇಳಿಬಂದ ನಂತರ ದಿನಗಳಿಂದಲೂ ವಿದೇಶದಲ್ಲಿದ್ದ ಎಂ.ಜೆ. ಅಕ್ಬರ್ ಭಾನುವಾರ ಬೆಳಗ್ಗೆ ಭಾರತಕ್ಕೆ ಬಂದರು. ಆರೋಪ ಕೇಳಿಬಂದ ವಾರದವರೆಗೂ ಯಾವುದೇ ಕ್ರಮಕ್ಕೂ ಮುಂದಾಗಿರದ ಬಿಜೆಪಿ, ಈ ವಿಷಯದಲ್ಲಿ ಅಕ್ಬರ್ ಅವರಿಂದ ವಿವರಣೆ ಪಡೆದು, ನಂತರ ಕ್ರಮ ಜರುಗಿಸಲು ನಿರ್ಧರಿಸಿತ್ತು. ಅದರಂತೆ ಅಕ್ಬರ್ ದೇಶಕ್ಕೆ ಬಂದಾಕ್ಷಣವೇ ರಾಜೀನಾಮೆ ನೀಡುವಂತೆ ಪಕ್ಷ ಅಕ್ಬರ್ ಅವರಿಗೆ ಸೂಚನೆ ನೀಡಿದೆ.
ಭಾರತೀಯ ಜನತಾ ಪಕ್ಷವೂ ಈ ವಿಷಯದಲ್ಲಿ ಹಲವು ದಿನಗಳಿಂದ ಮೌನ ವಹಿಸಿದೆ. ಪಕ್ಷದ ಮೂಲಗಳ ಪ್ರಕಾರ, ಅಕ್ಬರ್ ವಿರುದ್ಧ ಪಕ್ಷವೂ ಗಂಭೀರ ಕ್ರಮ ತೆಗೆದುಕೊಳ್ಳಲಿದೆ. ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆಯೂ ಇದೆ. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಕ್ಬರ್ ಮಂತ್ರಿಯಾದ ನಂತರ ಅವರ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಮತ್ತು ಈಗ ಕೇಳಿ ಬಂದಿರುವ ಆರೋಪ ಅವರು ಮಂತ್ರಿಯಾಗುವ ಮುಂಚೆಯೇ ನಡೆದಿರುವಂತಹದ್ದು ಎಂಬ ದೃಷ್ಟಿಕೋನದಲ್ಲೂ ಪಕ್ಷ ಯೋಚನೆ ಮಾಡಲಿದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಮೊದಲು ರಾಜೀನಾಮೆ ನೀಡಿ, ಆನಂತರ ಮುಂದಿನದನ್ನು ನೋಡೋಣ ಎಂದು ಹೇಳುವ ಮೂಲಕ ಸಚಿವರ ರಾಜೀನಾಮೆಗೆ ಪಕ್ಷ ಸೂಚಿಸಿತು.
ಆರೋಪದಲ್ಲಿ ಸತ್ಯಾಸತ್ಯತೆ ಈಗ ಮುಖ್ಯವಲ್ಲ. ಈ ಸಮಯದಲ್ಲಿ ರಾಜೀನಾಮೆ ಅಷ್ಟೇ ಮುಖ್ಯ ವಿಷಯವಾಗಿದೆ. ಯಾವುದೇ ವಿವರಣೆ, ಸ್ಪಷ್ಟನೆ ಬೇಡ, ಮೊದಲು ರಾಜೀನಾಮೆ ನೀಡಿ ಎಂದು ಪಕ್ಷವೂ ಎಂ.ಜೆ.ಅಕ್ಬರ್ಗೆ ಹೇಳಿದೆ ಎಂದು ಸರ್ಕಾರ ಮೂಲಗಳು ತಿಳಿಸಿದೆ.
ಅಕ್ಬರ್ ಅವರು ಸಂಪಾದಕರಾಗಿದ್ದ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಹಲವು ಮಹಿಳೆಯರು #MeToo ಅಭಿಯಾನದಡಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಅಭಿಯಾನ ಬೆಂಬಲಿಸಿ ಕೇಂದ್ರದ ಸಚಿವೆ, ಆರೋಪ ಕೇಳಿಬಂದಿರುವ ಮಂತ್ರಿ ವಿರುದ್ಧ ಪಕ್ಷ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.
ಆರೋಪ ಕೇಳಿಬಂದಿರುವ ಅಕ್ಬರ್ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆಗ್ರಹಿಸಿತ್ತು.
ಹಿರಿಯ ಪತ್ರಕರ್ತರಾದ ಎಂ.ಜೆ. ಅಕ್ಬರ್ ಕಿರಿಯ ವಿದೇಶಾಂಗ ವ್ಯವಹಾರ ಖಾತೆ ಸಚಿವರಾಗಿದ್ದಾರೆ. ತಮ್ಮ ಅಧೀನ ಸಚಿವರ ಮೇಲೆ ಕೇಳಿಬಂದಿರುವ ಆರೋಪಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಕೂಡ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಂ.ಜೆ. ಅಕ್ಬರ್ ಪ್ರಮುಖ ಸುದ್ದಿಪತ್ರಿಕೆಗಳಾದ ಟೆಲಿಗ್ರಾಫ್, ಏಷ್ಯನ್ ಏಜ್ ಮತ್ತು ಸಂಡೆ ಗಾರ್ಡಿಯನ್ ಸಂಪಾಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು.
ಎಂ.ಜೆ. ಅಕ್ಬರ್ ವಿರುದ್ಧ ಹಲವು ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪತ್ರಕರ್ತೆ ಪ್ರಿಯಾ ರಮಣಿ ಎಂಬುವವರು ಮೊದಲಿಗೆ ಅಕ್ಬರ್ ವಿರುದ್ಧ ಆರೋಪ ಮಾಡಿದರು. ಕಳೆದ ವರ್ಷ ಇವರು ಅಕ್ಬರ್ ಅಸಭ್ಯ ವರ್ತನೆ ಬಗ್ಗೆ ಮ್ಯಾಗಝಿನ್ ಒಂದಕ್ಕೆ ಅಕ್ಬರ್ ಹೆಸರು ಉಲ್ಲೇಖಿಸದೆ ಲೇಖನ ಬರೆದಿದ್ದರು. ಕಳೆದ ವಾರ ಅಸಭ್ಯ ವರ್ತನೆ ತೋರಿದ ವ್ಯಕ್ತಿ ಯಾರು ಎಂಬುದನ್ನು ಹೇಳಿದ್ದರು.