ಬೆಂಗಳೂರು, ಅ.14- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ತಮ್ಮ ಸಚಿವಾಲಯಕ್ಕೆ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ.
ಈ ಪೈಕಿ ಸುಮಾರು 250 ಮಂದಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ವಿಶೇಷ ಅಧಿಕಾರಿಗಳು, ವಿಶೇಷ ಕರ್ತವ್ಯ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು, ಸಿ ಮತ್ತು ಡಿ ದರ್ಜೆಯ ಅಧಿಕಾರಿಗಳು, ಹಿರಿಯ ಅಧಿಕಾರಿಗಳು ಸೇರಿದ್ದಾರೆ.
ಜನತಾದರ್ಶನ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ ಸೇರಿದಂತೆ ಸುಮಾರು 400ಕ್ಕೂ ವಿವಿಧ ವರ್ಗದ ಅಧಿಕಾರಿಗಳು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಲ್ಲದೆ ಬೇರೆ ಬೇರೆ ಇಲಾಖೆಯಿಂದಲೂ ನಿಯೋಜನೆ ಮೇಲೆ ಬಂದಿರುವ ಅಧಿಕಾರಿ ಮತ್ತು ನೌಕರರು ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕುವುದಾಗಿ ಘೋಷಣೆ ಮಾಡಿದ್ದ ಮುಖ್ಯಮಂತ್ರಿಗಳೇ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.