ಬೆಂಗಳೂರು, ಅ.14- ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಎಚ್1ಎನ್1 ರೋಗದ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ರೋಗ ತಡೆಗೆ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಭರವಸೆ ನೀಡಿದರು.
ಎಚ್1ಎನ್1 ರೋಗ ತಡೆಗಟ್ಟುವ ಕುರಿತು ಇಂದು ಮೇಯರ್ ಗಂಗಾಂಬಿಕೆ, ಆಯುಕ್ತ ಮಂಜುನಾಥ್ ಪ್ರಸಾದ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ರಾಜೀವ್ಗಾಂಧಿ ಆರೋಗ್ಯ ಸಂಸ್ಥೆ ನಿರ್ದೇಶಕ ನಾಗರಾಜ್, ಶಾಸಕ ಕೆ.ಗೋಪಾಲಯ್ಯ ಹಾಗೂ ಪಾಲಿಕೆ ವೈದ್ಯಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಸೆಪ್ಟೆಂಬರ್ ತಿಂಗಳಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 7 ಮಂದಿ ಎಚ್1ಎನ್1ನಿಂದ ಮೃತಪಟ್ಟಿದ್ದಾರೆ. ಹಾಗಾಗಿ ರೋಗ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
2018ರ ಜನವರಿಯಿಂದ ಇಲ್ಲಿಯವರೆಗೂ 4902 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಇದರಲ್ಲಿ 456 ಮಂದಿಯಲ್ಲಿ ಎಚ್1ಎನ್1 ರೋಗಾಣು ಪತ್ತೆಯಾಗಿದೆ. 2015ರಲ್ಲಿ ಎಚ್1ಎನ್1ನಿಂದಾಗಿ 94 ಮಂದಿ ಮೃತಪಟ್ಟಿದ್ದರು. 2016ರಲ್ಲಿ ಯಾರೂ ಮೃತಪಟ್ಟಿರಲಿಲ್ಲ. 2017ರಲ್ಲಿ ಮೂರು ಸಾವಿರ ಮಂದಿಗೆ ರೋಗ ಲಕ್ಷಣಗಳು ಕಾಣಿಸಿತ್ತು. ಅದರಲ್ಲಿ 15 ಮಂದಿ ಮೃತಪಟ್ಟಿದ್ದರು. ಈಗ 2018ರಲ್ಲೂ ಎಚ್1ಎನ್1 ಕಾಣಿಸಿದೆ. ಈಗಾಗಲೇ ಏಳು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹೆಚ್ಚು ಮಂದಿ ಬಲಿಯಾಗಬಾರದು ಎಂಬ ಉದ್ದೇಶದಿಂದ ರಾಜೀವ್ಗಾಂಧಿ ಆರೋಗ್ಯ ಸಂಸ್ಥೆಯ ಆರೋಗ್ಯಾಧಿಕಾರಿಗಳು ಬಿಬಿಎಂಪಿ ವೈದ್ಯಾಧಿಕಾರಿಗಳಿಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ. ಯಾರೂ ಆತಂಕ ಪಡಬೇಡಿ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಎಚ್1ಎನ್1 ರೋಗ ಪತ್ತೆಗೆ ಯಾವುದೇ ಲ್ಯಾಬ್ ಇಲ್ಲ. ಹಾಗಾಗಿ ಈ ಭಾಗದಲ್ಲಿ ಸರ್ಕಾರದಿಂದಲೇ ಪ್ರಯೋಗಾಲಯ ಆರಂಭಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್1ಎನ್1ನಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ, ಅರಿಸೀಕೆರೆ, ತುಮಕೂರು, ಕಲಬುರ್ಗಿ ಮತ್ತಿತರ ಕಡೆಯ ಕೆಲವರು ಬಲಿಯಾಗಿದ್ದಾರೆ. ಎಚ್1ಎನ್1 ಕಾಣಿಸಿಕೊಂಡ ರೋಗಿಯ ಉಸಿರಾಟದಿಂದ ಅಕ್ಕ-ಪಕ್ಕದವರಿಗೂ ರೋಗ ಹರಡುವ ಸಾಧ್ಯತೆ ಇರುವುದರಿಂದ ರೋಗಿಯನ್ನು ಬೇರ್ಪಡಿಸಿ ಚಿಕಿತ್ಸೆ ನೀಡಬೇಕು. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಪರಮೇಶ್ವರ್ ಸಲಹೆ ನೀಡಿದರು.
ಬಿಟ್ಟೂ ಬಿಡದೆ ಜ್ವರ, ಗಂಟಲು ನೋವು ಕಾಣಿಸಿದರೆ ತಕ್ಷಣ ಬಿಬಿಎಂಪಿ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅವರು ಸೂಚಿಸಿದರು.
ಜೀಕಾ ವೈರಸ್ ಪತ್ತೆಯಾಗಿಲ್ಲ:
ಉತ್ತರ ಭಾರತದ ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲಿ ಜೀಕಾ ವೈರಸ್ ಹಾವಳಿ ಹೆಚ್ಚಾಗಿದೆ. ಆದರೆ, ಈ ವೈರಸ್ ನಮ್ಮ ರಾಜ್ಯದಲ್ಲಿ ಪತ್ತೆಯಾಗಿಲ್ಲ ಎಂದು ಇದೇ ವೇಳೆ ಡಿಸಿಎಂ ಸ್ಪಷ್ಟಪಡಿಸಿದರು.
ಒಂದು ವೇಳೆ ಜೀಕಾ ವೈರಸ್ ಕಾಣಿಸಿಕೊಂಡರೆ ಯಾರೂ ಗಾಬರಿಯಾಗಬಾರದು. ಅಂತಹ ಪ್ರಕರಣ ಪತ್ತೆಯಾದರೆ ಅದರ ನಿವಾರಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.